ಬೆಂಗಳೂರು.ಜುಲೈ.28: ಬಂಗಾಳಕೊಲ್ಲಿಯ ಉತ್ತರ ಭಾಗ ಹಾಗೂ ಒಡಿಶಾ ಕರಾವಳಿ ಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕ ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದ್ದು, ಈ ಪ್ರದೇಶಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಅಷ್ಟೇ ಅಲ್ಲದೆ, ಜುಲೈ 29 ರಂದು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ ಜುಲೈ 30 ರಂದು ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಜುಲೈ 29 ರಿಂದ ಎರಡು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.











