Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀರಿನ ಮೌಲ್ಯ ಅರಿತು ನೆಲದ ಋಣ ತೀರಿಸೋಣ : ಚಿತ್ರದುರ್ಗದ ಶ್ರೀಬಸವ ಮಾಚಿದೇವ ಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಜೂನ್‌. 16 : ಸುದ್ದಿಒನ್ ವಾಹಿನಿಯು ಹಮ್ಮಿಕೊಂಡಿರುವ `ನೀರನ್ನು ಉಳಿಸಿ, ನೆಲದ ಋಣವನ್ನು ತೀರಿಸಿ’ ಎನ್ನುವ ಅಭಿಯಾನವು ಇಂದಿನ ಕಾಲಕ್ಕೆ ಅತ್ಯಂತ ಪ್ರಸ್ತುತ ಹಾಗೂ ಸಂತೋಷದಾಯಕವಾದ ವಿಷಯವಾಗಿದೆ ಎಂದು ಚಿತ್ರದುರ್ಗದ ಶ್ರೀ ಜಗದ್ಗುರು ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಸ್ವಾಮೀಜಿ ಅವರು ಶ್ಲಾಘಿಸಿದ್ದಾರೆ.

 

ಪ್ರಸ್ತುತ ಸಮಾಜವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯಾದ ನೀರಿನ ಕೊರತೆಯ ಕುರಿತು ಶ್ರೀಗಳು ತಮ್ಮ ಮಠದ ವಾಸ್ತವ ಚಿತ್ರಣದೊಂದಿಗೆ ಕಳಕಳಿಯ ಮಾತುಗಳನ್ನಾಡಿದ್ದಾರೆ. ಇವತ್ತು ನಮ್ಮ ಶ್ರೀಮಠದಲ್ಲಿ ಭಕ್ತರಿಗೆ ಅಥವಾ ಅತಿಥಿಗಳಿಗೆ ಇರಲಿಕ್ಕೆ ಜಾಗದ ಕೊರತೆಯಿಲ್ಲ, ಉಡಲಿಕ್ಕೆ ಬಟ್ಟೆಯ ಕೊರತೆಯಿಲ್ಲ, ಪ್ರಸಾದಕ್ಕೂ ಯಾವುದೇ ಕೊರತೆಯಿಲ್ಲ. ಆದರೆ, ಇವತ್ತಿಗೆ ಅತ್ಯಂತ ಅತ್ಯಗತ್ಯವಾಗಿರುವ ಮತ್ತು ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ನೀರಿನ ಕೊರತೆ. ಸುಮಾರು ಏಳು-ಎಂಟು ವರ್ಷಗಳ ಹಿಂದಿನಿಂದಲೂ ನಾವು ನೀರಿನ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಮಠಕ್ಕೆ ಯಾರೇ ಭಕ್ತರು ಬರಲಿ, ಅತಿಥಿಗಳು ಬರಲಿ ಅಥವಾ ನಮ್ಮ ಸಿಬ್ಬಂದಿ ವರ್ಗವೇ ಇರಲಿ, ಪ್ರತಿನಿತ್ಯವೂ ನೀರನ್ನು ಹೊರಗಿನಿಂದ ತರಿಸಬೇಕಾದ ಅನಿವಾರ್ಯತೆ ಇದೆ. ನಮ್ಮದೇ ಸ್ವಂತ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ಮೂಲಕ ನೀರನ್ನು ತಂದು, ಮಠದ ಸಂಪಿಗೆ ಡಂಪ್ ಮಾಡಿ, ಆ ಸಂಪಿನಿಂದಲೇ ನೀರನ್ನು ಬಿಡುವಂತಹ ಪ್ರವೃತ್ತಿ ಕಳೆದ ಏಳು-ಎಂಟು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ನೀರಿನ ನಿಜವಾದ ಮೌಲ್ಯ ಎಷ್ಟು ಎಂಬುದು ನಮಗೆ ಪ್ರತ್ಯಕ್ಷವಾಗಿ ಗೊತ್ತಾಗಿದೆ.

ಹಣಕ್ಕಿಂತಲೂ ನೀರು ಅತ್ಯಂತ ಅಮೂಲ್ಯ
ನಾವು ಸ್ವಾಭಾವಿಕವಾಗಿ ಆಡುಮಾತಿನಲ್ಲಿ ಹೇಳ್ತೀವಿ ‘ಏನಪ್ಪಾ ಹಣವನ್ನ ನೀರ್ ಚೆಲ್ಲದಂಗೆ ಚೆಲ್ತಿರಲ್ಲ’ ಅಂತ. ಆದರೆ ಇವತ್ತಿನ ಪರಿಸ್ಥಿತಿಯನ್ನು ನೋಡಿದರೆ, ನೀರನ್ನು ಚೆಲ್ಲಿದರೆ ಅಥವಾ ನೀರನ್ನು ಹಾಳು ಮಾಡಿದರೆ, ನಾವು ಹಣವನ್ನೇ ಹಾಳು ಮಾಡಿದ ಹಾಗೆ ಎನ್ನುವ ಸತ್ಯ ನಮಗೆ ಇವತ್ತು ಭಾಸವಾಗುತ್ತಿದೆ. ಆ ಕಾರಣಕ್ಕಾಗಿ ನೀರನ್ನು ಉಳಿಸಿ, ಈ ನೆಲದ ಋಣವನ್ನು ತೀರಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಮಾಡಬೇಕಾಗಿದೆ. ಖಂಡಿತವಾಗಿ ನಾವು ಪ್ರಕೃತಿಗೆ ಮರಳಿ ಕೊಡುಗೆಯನ್ನು ನೀಡಬೇಕು. ಪ್ರಕೃತಿಯ ಸೌಂದರ್ಯವನ್ನು ಕಾಪಾಡುವ ಮತ್ತು ಆ ಸೌಂದರ್ಯವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತಿಯನ್ನು ಮೂಡಿಸಬೇಕಾಗಿದ್ದು ನಮ್ಮ ಧರ್ಮ ಎಂದು ಶ್ರೀಗಳು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

 

ಮಠದ ಸಂಕಷ್ಟಕ್ಕೆ ನೆರವಾದ ಹಿತೈಷಿಗಳು: ಹದಿಮೂರು ವರ್ಷಗಳ ಟ್ಯಾಂಕರ್ ಸೇವೆ ಮಠದ ಈ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ ಅಥವಾ ಸದ್ಯದ ತೊಂದರೆ ನಿವಾರಣೆಯಾಗಲಿ ಎಂಬ ಉದ್ದೇಶದಿಂದ, ಶ್ರೀಮಠದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್ ಸಂಗಮೇಶ್ ಕಲಾಲ್ ಅವರು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮನಗಂಡರು. ಅವರು ತಮ್ಮ ಅಳಿಯಂದಿರಾದ ಶಿವಾನಂದ್ ಕಲ್ಕೇರಿ ಅವರ ಜೊತೆಗೂಡಿ, ಇಲ್ಲ ಬುದ್ಧಿ, ನಾನು ಮತ್ತು ನಮ್ಮ ಅಳಿಯ ಸೇರಿ ಮಠಕ್ಕೊಂದು ಟ್ಯಾಂಕರ್ ಕೊಡುತ್ತೇವೆ ಎಂದು ನಿರ್ಧರಿಸಿ, ಸುಮಾರು 2010-11 ರಲ್ಲಿ ಶ್ರೀಮಠಕ್ಕೆ ಒಂದು ನೀರಿನ ಟ್ಯಾಂಕರ್ ಅನ್ನು ಕೊಡುಗೆಯಾಗಿ ನೀಡಿದರು.

ಅವತ್ತಿನಿಂದ ಇವತ್ತಿನವರೆಗೂ ಶ್ರೀಮಠದ ಯಾವುದೇ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ನಡೆದಿದ್ದರೂ, ಇದೇ ಟ್ಯಾಂಕರ್ ತಂದ ನೀರನ್ನೇ ಕ್ಯೂರಿಂಗ್ ಮಾಡಲು ಬಳಸಲಾಗಿದೆ. ಕಳೆದ 12-13 ವರ್ಷಗಳಿಂದಲೂ ಈ ಟ್ಯಾಂಕರ್ ಮಠಕ್ಕೆ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಾ, ಮಠದ ಕಟ್ಟಡಗಳಿಗೆ ಹಾಗೂ ಇಲ್ಲಿಗೆ ಬರುವ ಬಂಧುಗಳಿಗೆ ನೀರನ್ನು ಕೊಡುವ ಮಹತ್ತರ ಕೆಲಸವನ್ನು ಮಾಡಿದೆ ಎಂದು ಶ್ರೀಗಳು ಹೇಳಿದರು.

8 ಬೋರ್‌ವೆಲ್ ಕೊರೆಸಿದರೂ ಸಿಗದ ನೀರು: ಮಳೆಯಾಶ್ರಿತ ಸೀಪೇಜ್ ಮಾತ್ರ ಆಧಾರ ಇವತ್ತಿನ ದಿನ ಬಿರು ಬೇಸಿಗೆಯಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಶ್ರೀಮಠದಲ್ಲಿ ನೀರಿನ ಪರಿಸ್ಥಿತಿ ಗಂಭೀರವಾಗಿದೆ. ಮಠದ ಆವರಣದಲ್ಲಿ ಸುಮಾರು ಏಳು-ಎಂಟು ಬೋರ್‌ ವೆಲ್‌ ಗಳನ್ನು ಕೊರೆಸಿದರೂ ಸಹ ಒಂದರಲ್ಲೂ ನೀರು ಸಿಕ್ಕಿಲ್ಲ ಹಾಗಾದರೆ ಮಠಕ್ಕೆ ನೀರು ಎಲ್ಲಿಂದ ಸಿಗುತ್ತದೆ ಎಂದರೆ, ಅದು ಕೇವಲ ಮಳೆಯಾಶ್ರಿತ ಸೀಪೇಜ್ ನೀರು ಮಾತ್ರ. ಮಳೆ ಬಂದಾಗ ಮಾತ್ರ ಆ ಬೋರ್‌ ವೆಲ್‌ ಗಳಲ್ಲಿ ಸ್ವಲ್ಪ ನೀರು ಒರತೆಯಾಗಿ ತುಂಬಿಕೊಳ್ಳುತ್ತದೆ. ಆ ನೀರು ಎಷ್ಟು ಮಾತ್ರ ಇರುತ್ತದೆ ಎಂದರೆ, ದಿನಕ್ಕೆ ಕೇವಲ ಒಂದೇ ಒಂದು ಸಿಂಟೆಕ್ಸ್ ಟ್ಯಾಂಕ್ ತುಂಬುವಷ್ಟು ಮಾತ್ರ. ಮತ್ತೆ ನಮಗೆ ನೀರು ಬೇಕು ಎಂದರೆ ಮರುದಿನ ಬೆಳಗ್ಗೆಯವರೆಗೆ ಕಾಯ್ದು, ಮತ್ತೆ ಮೋಟರ್ ಚಾಲು ಮಾಡಬೇಕಾದ ಅದೆಷ್ಟೋ ಪ್ರಸಂಗಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಹಾಗಾಗಿ ಈ ಶ್ರೀಮಠದಲ್ಲಿ ನಮಗೆ ಎದುರಾಗಿರುವ ಅತ್ಯಂತ ದೊಡ್ಡ ಸವಾಲು ಎಂದರೆ ಅದು ನೀರಿನ ಸವಾಲು. ಆ ಸವಾಲನ್ನು ಇವತ್ತು ನಾವು ಎದುರಿಸುತ್ತಿದ್ದೇವೆ.

 

ಮಳೆ ನೀರು ಕೊಯ್ಲು ಮೂಲಕ ಮುಂಜಾಗ್ರತೆ
ಇಷ್ಟೊಂದು ಕಠಿಣ ಸಮಸ್ಯೆಗಳನ್ನು ಎದುರಿಸುವ ಜೊತೆಜೊತೆಯಲ್ಲೇ, ಇದಕ್ಕೆ ಒಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನಾವು ಯೋಚಿಸಿದೆವು. ಅದರಂತೆ ನಮ್ಮ ಶ್ರೀಮಠದ ಆವರಣದಲ್ಲಿ ಸುಮಾರು 3 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ಒಂದನ್ನು ನಿರ್ಮಿಸಿಕೊಂಡು, ಅದಕ್ಕೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ.
ಕಳೆದ ಎರಡು-ಮೂರು ಮಳೆಗಾಲದ ಅವಧಿಯಲ್ಲಿ ಬಿದ್ದ ಮಳೆನೀರನ್ನು ನಾವು ಸಂಪೂರ್ಣವಾಗಿ ಸಂಗ್ರಹಿಸಿ, ಆ ನೀರನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡು, ಮುಂಜಾಗ್ರತಾ ಕ್ರಮವಾಗಿ ಇವತ್ತು ಮಠದ ಬಳಕೆಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂದು ಶ್ರೀಗಳು ಮಾಹಿತಿ ನೀಡಿದರು.

ಕೊನೆಯದಾಗಿ ಶ್ರೀಬಸವ ಮಾಚಿದೇವ ಸ್ವಾಮೀಜಿಯವರು ನಾಡಿನ ಜನತೆಗೆ ಕರೆ ನೀಡುತ್ತಾ, ನೀರನ್ನು ಉಳಿಸುವುದು ನಮ್ಮ ಧರ್ಮ. ಅಷ್ಟೇ ಅಲ್ಲ, ಆ ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಕೊಟ್ಟು ಹೋಗುವುದು ಕೂಡ ನಮ್ಮ ಧರ್ಮ ಎಂದು ಕರೆ ನೀಡಿದ್ದಾರೆ. ಸುದ್ದಿ ಒನ್ ವಾಹಿನಿಯ ಈ ಸತ್ಕಾರ್ಯಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಶ್ರೀಗಳು ಆಶೀರ್ವದಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now