ಚಿತ್ರದುರ್ಗ. ಆ.29: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿ ಹಾಗೂ ಕಟ್ಟಕಡೆಯ ಗ್ರಾಮಕ್ಕೂ ತಲುಪುವಂತೆ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರಮಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ಸುನಿಲ್ ಕುಮಾರ್ ಕರೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ. ರಾಯ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 41ನೇ ‘ರಾಷ್ಟ್ರೀಯ ನೇತ್ರದಾನ ಪಾಕ್ಷಿಕ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆಯಿಂದ ಕಣ್ಣಿನ ರಕ್ಷಣೆ ಮರೆಯುತ್ತಿದ್ದೇವೆ. ಮರಣೋತ್ತರ ನೇತ್ರದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ಹೇಳಿದರು.
ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಜಿ.ಒ. ನಾಗರಾಜ್ ಮಾತನಾಡಿ, ಭಾರತದಲ್ಲಿ ಸುಮಾರು 1.2 ಕೋಟಿ ಅಂಧರಿದ್ದು, 68 ಲಕ್ಷ ಜನರು ಕರಿಗುಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ವರ್ಷಕ್ಕೆ ಕೇವಲ 25 ಸಾವಿರ ಪಾರದರ್ಶಕ ಕಸಿ ಶಸ್ತ್ರ ಚಿಕಿತ್ಸೆಗಳು ಮಾತ್ರ ನಡೆಯುತ್ತಿವೆ. ಸಂಭ್ರಮಿಸುವ ಪ್ರಪಂಚವನ್ನು ವೀಕ್ಷಿಸಲು ಕಾಯುತ್ತಿರುವ ಅಂಧರಿಗೆ ಬೆಳಕಾಗಲು ನೇತ್ರಗಳನ್ನು ಮರಣ ನಂತರ ಮಣ್ಣಾಗಿಸದೆ ಮತ್ತು ದಹಿಸದೆ ದಾನ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ನೇತ್ರದಾನಕ್ಕೆ ಮಧುಮೇಹ, ರಕ್ತದೊತ್ತಡ ಮುಂತಾದ ಕಣ್ಣಿಗೆ ಅಥವಾ ದೇಹಕ್ಕೆ ಸಂಬಂದಿಸಿದ ಯಾವುದೇ ರೋಗಗಳು ಅಡ್ಡಿಯನ್ನು ಉಂಟು ಮಾಡುವುದಿಲ್ಲ. ಪ್ರತಿಯೊಬ್ಬರಿಗೂ ಮಾಹಿತಿ ನೀಡಿ ನೇತ್ರದಾನ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ ಎಂದರು.
ವ್ಯಕ್ತಿ ಮೃತಪಟ್ಟ 4 ರಿಂದ 6 ಗಂಟೆಯೊಳಗೆ ನೇತ್ರ ಸಂಗ್ರಹಿಸಬೇಕು. ಮೃತರ ಕಣ್ಣುರೆಪ್ಪೆ ಮುಚ್ಚಿ, ತಲೆಯನ್ನು ಕೊಂಚ ಎತ್ತರಿಸಿ, ಫ್ಯಾನ್ ಬಂದ್ ಮಾಡಿ ಕಣ್ಣಿನ ಮೇಲೆ ತಣ್ಣೀರಿನ ಬಟ್ಟೆ ಇಡಬೇಕು. ಇದರಿಂದ ಮುಖ ವಿಕಾರಗೊಳ್ಳುವುದಿಲ್ಲ ಎಂದು ನೇತ್ರ ತಜ್ಞೆ ಡಾ. ಐ.ಎಂ. ಶಿಲ್ಪ ವಿವರಿಸಿದರು.
ಒಬ್ಬರ ನೇತ್ರದಾನದಿಂದ ಇಬ್ಬರು ಅಂಧರಿಗೆ ದೃಷ್ಟಿ ಸಿಗಲಿದ್ದು, ಆಸಕ್ತರು ‘ಜೀವನ ಸಾರ್ಥಕತೆ’ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನೇತ್ರ ತಜ್ಞರಾದ ಡಾ. ಬಿ.ಜಿ. ಪ್ರದೀಪ್, ಡಾ.ಸುಜಾತಾ ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದರೆಡ್ಡಿ ಕೊಣ್ಣೂರ್, ನೇತ್ರ ತಜ್ಞೆ ಡಾ. ಜಿ. ಸ್ವಾತಿ, ನೇತ್ರಾಧಿಕಾರಿ ಕೆ.ಸಿ. ರಾಮು ಸೇರಿದಂತೆ ನೇತ್ರಾಧಿಕಾರಿಗಳು ಹಾಗೂ ನಸಿರ್ಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















