ದಾವಣಗೆರೆ ಮಾ.30 : ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಎರಡು ದಿನಗಳ ಕಾಲ ಸಕ್ರಿಯವಾಗಿ ಪ್ರಚಾರ ನಡೆಸಲಿದ್ದಾರೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಏಪ್ರಿಲ್ 4ರಂದು ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಏಪ್ರಿಲ್ 5ರಂದು ಅವರು ಪ್ರಚಾರ ಕೈಗೊಂಡು ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಈ ಬಾರಿ ಜೆಡಿಎಸ್ ಉಪಚುನಾವಣೆಯಲ್ಲಿ ಸ್ಪರ್ಧಿಸದೇ ಎನ್‌ಡಿಎ ಮೈತ್ರಿಗೆ ಬೆಂಬಲ ಸೂಚಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ಟಿ. ದಾಸಕರಿಯಪ್ಪ ಸ್ಪರ್ಧಿಸುತ್ತಿದ್ದು, ಅವರ ಪರ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚರಂತಿಮಠ ವೀರಭದ್ರಯ್ಯ ಅವರ ಪರವೂ ಅವರು ಮತಯಾಚನೆ ಮಾಡಲಿದ್ದಾರೆ.

ಇದಲ್ಲದೆ ಜೆಡಿಎಸ್ ಶಾಸಕರು, ಸಂಸದರು, ಮಾಜಿ ಸಚಿವರು ಹಾಗೂ ಪಕ್ಷದ ಪ್ರಮುಖ ನಾಯಕರು ಕೂಡ ಬಿಜೆಪಿ ನಾಯಕರೊಂದಿಗೆ ಸೇರಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಪ್ರಚಾರದ ದಿನಾಂಕ ನಿಗದಿಯಾಗಿದ್ದರೂ, ಯಾವ ಪ್ರದೇಶಗಳಲ್ಲಿ ಸಭೆಗಳು ಹಾಗೂ ಪ್ರಚಾರ ಕಾರ್ಯಕ್ರಮಗಳು ನಡೆಯಲಿವೆ ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.












