Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಐ ಯುಗದಲ್ಲಿ ಜ್ಞಾನವೇ ಶಾಶ್ವತ ಸಂಪತ್ತು: ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪೋಷಕರಿಗೆ ಸಲಹೆ ಇಲ್ಲಿದೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

 

ಸುದ್ದಿಒನ್, ನಾಯಕನಹಟ್ಟಿ, ಮೇ. 03 : ಬಡ್ಡಿ ಹಾಗೂ ಜೀವನದ ಭದ್ರತೆಗೆ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದಂತೆ ಎಐ ಯುಗದಲ್ಲಿ ಶಿಕ್ಷಣ ಮತ್ತು ಜ್ಞಾನವನ್ನು ಠೇವಣಿಯನ್ನಾಗಿಸಬೇಕಿದೆ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌.ರಾಘವೇಂದ್ರ ತಿಳಿಸಿದರು.

ಪಟ್ಟಣದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎಐ ಯುಗದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು ? ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಬರುವ ಜ್ಞಾನ ಎಂಬ ಬಡ್ಡಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಹಣವಿದ್ದರೆ ಕಳೆಯುವ ಚಿಂತೆ ಇರುತ್ತದೆ. ಆದರೆ ಜ್ಞಾನವನ್ನು ಕದಿಯಲು, ಕಳೆಯಲು ಸಾಧ್ಯವಿಲ್ಲ ಎಂದರು.

ಕೇವಲ ಬಿಎ, ಬಿಎಸ್ಸಿಗಳಿಂದ ಇದೀಗ ಜೀವನ ಸಾಧ್ಯವಿಲ್ಲ. ಉತ್ತಮ ಜೀವನಕ್ಕಾಗಿ ಕೌಶಲ್ಯ ಮತ್ತು ಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಸರಕಾರದ ಕೌಶಲ್ಯ ತರಬೇತಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಟಿಟಿಸಿ ನಂತರ ಇಂಜಿನಿಯರಿಂಗ್ ಗೆ ಅವಕಾಶಗಳಿವೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪೂರ್ಣಗೊಂಡ ಈ ಕ್ಷಣ, ಮಕ್ಕಳಿಗಷ್ಟೇ ಅಲ್ಲ ತಂದೆ ತಾಯಿಗಳಿಗೆ ಕೂಡ ಮಹತ್ವದ ಹಂತ. ಇವರೆಗೂ ನೀವು ನಿಮ್ಮ ಮಕ್ಕಳನ್ನು ಕೈ ಹಿಡಿದು ನಡೆಸಿದ್ದೀರಿ. ಇನ್ನು ಮುಂದೆ ಅವರು ತಮ್ಮ ಬದುಕಿನ ದಾರಿಯನ್ನು ಆಯ್ಕೆ ಮಾಡುವ ತಿರುವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ನಿಮ್ಮ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ಪ್ರತಿಯೊಬ್ಬ ಮಗುವಿನಲ್ಲೂ ವಿಭಿನ್ನ ಪ್ರತಿಭೆ ಇದೆ. ಇತರರ ಜೊತೆ ಹೋಲಿಕೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಬದಲಾಗಿ, ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ತಕ್ಕ ಮಾರ್ಗವನ್ನು ಆಯ್ಕೆ ಮಾಡಲು ಬೆಂಬಲ ನೀಡಿ ಎಂದು ಪೋಷಕರಿಗೆ ಮನವಿ ಮಾಡಿದರು.

ಅಂಕಗಳ ಜತೆಗೆ ವ್ಯಕ್ತಿತ್ವ, ನೈತಿಕ ಮೌಲ್ಯಗಳು, ಶಿಸ್ತು ಇವೆಲ್ಲವೂ ಬದುಕಿನಲ್ಲಿ ದೊಡ್ಡ ಪಾತ್ರವಹಿಸುತ್ತವೆ. ನಿಮ್ಮ ಮಕ್ಕಳಿಗೆ ಇವುಗಳನ್ನು ಕಲಿಸುವುದು ನಿಮ್ಮ ಮಹತ್ವದ ಕರ್ತವ್ಯ. ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಗ್ಗೆ ಜಾಗೃತಿ ಅತ್ಯಗತ್ಯ. ಇವು ಕೇವಲ ಮನರಂಜನೆಗೆ ಮಾತ್ರವಲ್ಲ ಕಲಿಕೆಯ ದೊಡ್ಡ ಸಾಧನಗಳೂ ಆಗಿವೆ. ಆದ್ದರಿಂದ ನಿಯಂತ್ರಣದ ಜೊತೆಗೆ ಸರಿಯಾದ ಮಾರ್ಗದರ್ಶನ ನೀಡಿ. ಬಳಕೆ ಮತ್ತು ದುರ್ಬಳಕೆ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ತಿಳಿಸಿ.
ಮಕ್ಕಳಿಗೆ ಪ್ರಶ್ನೆ ಕೇಳಲು, ಯೋಚಿಸಲು, ಸೃಜನಾತ್ಮಕವಾಗಿ ಆಲೋಚಿಸಲು ಪ್ರೋತ್ಸಾಹಿಸಿ. ಎಐ ಯುಗದಲ್ಲಿ ನೀವು ಅವರಿಗೆ ಉತ್ತರ ಹೇಳುವುದಕ್ಕಿಂತ, ಉತ್ತರ ಹುಡುಕಲು ಮಾರ್ಗ ತೋರಿಸುವವರಾಗಬೇಕು ಎಂದು ತಿಳಿಸಿದರು.

ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ. ಅವರು ಎದುರಿಸುವ ಸವಾಲುಗಳು, ಭಯಗಳು, ಕನಸುಗಳು ಇವೆಲ್ಲವನ್ನು ಕೇಳಿ, ಅರ್ಥಮಾಡಿಕೊಳ್ಳಿ. ನಿಮ್ಮ ಪ್ರೋತ್ಸಾಹವೇ ಅವರಿಗೆ ದೊಡ್ಡ ಶಕ್ತಿ. ಯಶಸ್ಸು ಬರಲು ಸಮಯ ಬೇಕು. ಮಕ್ಕಳಿಗೆ ಸಹನೆ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸಿ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮ ಬೆಂಬಲ ಇರಲಿ ಎಂದರು.

ಇಂದು ಪ್ರಪಂಚವೇ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹೊಸ ಆವಿಷ್ಕಾರಗಳು ಇವೆಲ್ಲವೂ ನಿಮ್ಮ ಮುಂದೆ ಅಪಾರ ಅವಕಾಶಗಳನ್ನು ತೆರೆದಿವೆ. ಆದರೆ ಅವುಗಳ ಜೊತೆಗೆ ಸವಾಲುಗಳೂ ಇವೆ. ಆದ್ದರಿಂದ ಕೇವಲ ಅಂಕಗಳ ಜತೆಗೆ, ಕೌಶಲ್ಯ, ನೈತಿಕತೆ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಸಲಹೆ ನೀಡಿದರು.

ಬೆಂಗಳೂರಿನ ಶೈಕ್ಷಣಿಕ ಕೌಶಲ್ಯ ಸಲಹೆಗಾರ ಟಿ.ದಿಲೀಪ್‌ ಕುಮಾರ್‌ ಮಾತನಾಡಿ, ಮಾರುಕಟ್ಟೆ ವ್ಯವಸ್ಥೆಗೆ ತಕ್ಕಂತೆ ವಿದ್ಯಾಭ್ಯಾಸದ ವಿಧಾನಗಳು ಬದಲಾಗುತ್ತಿವೆ. ಐಟಿ,ಬಿಟಿ ನಂತರ ಇದೀಗ ಎಲ್ಲೆಡೆ ಕೃತಕ ಬುದ್ದಿಮತ್ತೆ (ಎಐ) ಎಲ್ಲೆಡೆ ವ್ಯಾಪಿಸುತ್ತಿದೆ ಎಂದರು.

ಐದು ವರ್ಷಗಳ ಹಿಂದೆ ಎಐ ಬಗ್ಗೆ ಸಣ್ಣ ಪ್ರಮಾಣದಲ್ಲಿ ಕಲಿಕೆ ಆರಂಭಿಸಲಾಗಿತ್ತು. ಸಾಫ್ಟ್‌ವೇರ್‌ ಕಂಪನಿಗಳ ಸಂಶೋಧನಾ ವಿಭಾಗದಲ್ಲಿ ಇದರ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಅಪಾರ ಪ್ರಮಾಣದಲ್ಲಿನ ದತ್ತಾಂಶಗಳನ್ನು ಸಂಗ್ರಹಿಸಿ ನೀಡಿದಾಗ ಕಂಪ್ಯೂಟರ್‌ ನಿರ್ಣಯ ಅಥವ ಪರಿಹಾರಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಕಂಪ್ಯೂಟರನ್ನು ಬಳಸುವ ಎಲ್ಲ ಕ್ಷೇತ್ರಗಳಲ್ಲಿ ಎಐ ಕಾಲಿಟ್ಟಿದೆ. ಮುದ್ರಣ, ಪತ್ರಿಕೆ, ಕಾರ್ಖಾನೆ, ಸಾಗಣಿಕೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಐ ಪ್ರಭಾವವನ್ನು ಕಾಣಬಹುದಾಗಿದೆ. ಡಿಜಿಟಲ್‌ ಯುಗದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಎಐ ದಾಪುಗಾಲಿಡುತ್ತಿದೆ. ಇದು ಪೂರಕ ಅಥವ ಮಾರಕ ಎನ್ನುವುದು ಮುಖ್ಯವಲ್ಲ. ಆದರೆ ಇದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಅವಕಾಶಗಳಿವೆ ಎಂದರು.

ಬ್ಯಾಚುಲರ್‌ ಆಫ್ ಕಾರ್ಡಿಯೋ ಟೆಕ್ನೋಲಜಿ ಎನ್ನುವ ಕೋರ್ಸ್‌ ಅತಿಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಹೀಗೆ ಫಾರ್ಮಸಿ, ಔಷಧ ಕ್ಷೇತ್ರದಲ್ಲಿ ಸಂಶೋಧನೆ, ನರ್ಸಿಂಗ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಮತ್ತು ಉತ್ತಮ ಗಳಿಕೆಗೆ ದಾರಿಗಳಿವೆ ಎಂದು ವಿವರಿಸಿದರು.

ಎಲ್ಲರೂ ಸೀಮಿತವಾಗಿ ಡಾಕ್ಟರ್‌ ಮತ್ತು ಇಂಜಿನಿಯರ್‌ಗಳಾಗುವ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ. ಭವಿಷ್ಯದ ಚಿಂತನೆಗಳಿಗೆ ಆಯಾಕ್ಷೇತ್ರಗಳಲ್ಲಿರುವವರು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆದುಕೊಳ್ಳಬೇಕು.  ಅಂಗಡಿ,ಮುಂಗಟ್ಟುಗಳ ಮುಂದೆ ಮಾತನಾಡುವವರು ಹೇಳಿಕೆಗಳ ಬದಲಾಗಿ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರುವ ವ್ಯಕ್ತಿಗಳಿಂದ ಸಲಹೆ ಪಡೆದುಕೊಳ್ಳಬೇಕು. ಹೊಸ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಂಚೆ ತನ್ನ ಇಷ್ಟ, ಆಸಕ್ತಿ ಮತ್ತು ಗುರುತಿಸಿಕೊಳ್ಳುವಿಕೆಯ ಬಗ್ಗೆ ಸ್ಪಷ್ಟತೆ ಇರಬೇಕು. ಬೇರೆಯವರ ಒತ್ತಡಕ್ಕೆ ಒಳಗಾಗಿ ಅಭ್ಯಾಸದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದರು.

ಸರ್ಕಾರಿ ಶಾಲೆ ಶಿಕ್ಷಕಿ ಚಂದನ ಮಾತನಾಡಿ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟ ಚಿಂತನೆಗಳು ಇರುವುದಿಲ್ಲ. ಇಂಥಹ ಕಾರ್ಯಕ್ರಮಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುಖ್ಯಶಿಕ್ಷಕಿಯರಾದ ಎ.ಉಮಾ, ಟಿ.ರೂಪ, ಮಹಾಂತೇಶ್‌, ಅಭಿಷೇಕ ಮತ್ತಿತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...