ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರ್ ಶೋ ಮುಂದಿನ ದಿನಗಳಲ್ಲಿ ಅನಿಶ್ಚಿತತೆಗೆ ಸಿಲುಕುವ ಸಾಧ್ಯತೆ ಎದುರಾಗಿದೆ. ಅರಣ್ಯ ಇಲಾಖೆಗೆ ಸೇರಿರುವ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಭಾರತೀಯ ವಾಯುಸೇನೆ ಹಾಗೂ ಕೇಂದ್ರ ಸರ್ಕಾರ ಸಂಯುಕ್ತವಾಗಿ ಆಯೋಜಿಸುವ ಏರೋ ಇಂಡಿಯಾ ಶೋ, ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದು, ದೇಶದ ಪ್ರಮುಖ ವಾಯು ಪ್ರದರ್ಶನಗಳಲ್ಲಿ ಒಂದಾಗಿದೆ. ಆದರೆ ಈ ಸ್ಥಳದ ಮಾಲೀಕತ್ವದ ವಿಚಾರವಾಗಿ ಇದೀಗ ವಿವಾದ ಮೂಡಿದೆ.

ಗಂಟಿಗಾನಹಳ್ಳಿ ಗ್ರಾಮದ ಸುಮಾರು 159 ಎಕರೆ ಪ್ರದೇಶದ ದಾಖಲೆಗಳು ಅರಣ್ಯ ಇಲಾಖೆಯ ಹೆಸರಿನಲ್ಲಿ ಇರುವುದಾಗಿ ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನ್ನ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಅರಣ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ ಎಂದು ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಸರ್ಕಾರದ ಪ್ರಮುಖ ಹೊಣೆಗಾರಿಕೆಯಾಗಿದೆ. ಹೀಗಾಗಿ ಅರಣ್ಯ ಭೂಮಿಯನ್ನು ಮರಳಿ ಪಡೆಯುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ ಶೋ ಮುಂದಿನ ಆಯೋಜನೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.


















