ಬೆಂಗಳೂರು: ಒಂದು ಕಡೆ ಜಿಎಸ್ಟಿ ದರ ಇಳಿಕೆಯಾಗಿದೆ ಎಂಬುದಕ್ಕೆ ಖುಷಿ ಕೊಡಬೇಕೋ ಅಥವಾ ಕೆಲವೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಸಂಕಟ ಪಡಬೇಕೋ ತಿಳಿಯುತ್ತಿಲ್ಲ. ಅದರಲ್ಲೂ ಪ್ರತಿನಿತ್ಯ ಬಳಕೆ ಮಾಡುವ ತುಪ್ಪದ ಬೆಲೆ ಇದ್ದಕ್ಕಿದ್ದ ಹಾಗೇ ಗಗನಕ್ಕೇರುತ್ತಿದೆ. ಈ ಸುದ್ದಿ ಕೇಳಿ ಕೆಎಂಎಫ್ ವಿರುದ್ಧ ಸಾಮಾನ್ಯ ಜನ ಬೇಸರ ಹೊರ ಹಾಕಿದ್ದಾರೆ. ಹಾಗಾದ್ರೆ ತುಪ್ಪದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ ಈಗ 90 ರೂಪಾಯಿ ಏರಿಕೆಯಾಗಿದೆ. ಇಂದಿನಿಂದಲೇ ಈ ನೂತನ ಬೆಲೆ ಜಾರಿಗೆ ಬರಲಿದೆ ಎಂದು ಕೆಎಂಎಫ್ ಸೂಚನೆ ನೀಡಿದೆ. ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂಪಾಯಿ ಇತ್ತು. ಪ್ರಸ್ತುತ 90 ರೂಪಾಯಿ ಏರಿಕೆಯಾಗಿರುವ ಹಿನ್ನಲೆ ಈಗ ಬರೋಬ್ಬರಿ 700 ರೂಪಾಯಿ ಆಗಿದೆ. ಇನ್ನು ತುಪ್ಪ ಹೊರತುಪಡಿಸಿ ಬೇರೆ ಯಾವುದೇ ಹಾಲು ಉತ್ಪನ್ನಗಳ ಬೆಲೆ ಏರಿಕೆಯಾಗಿಲ್ಲ.
ಪ್ರತಿ ದಿನ ಬಳಸುವ ಪದಾರ್ಥಗಳ ಮೇಲೆ ಬೆಲೆ ಏರಿಕೆಯನ್ನು ಕಂಡು ಜನರಂತು ಬೇಸರದಲ್ಲಿಯೇ ಜೀವನ ಸಾಗಿಸಿಕೊಂಡು ಹೋಗ್ತಿದ್ದಾರೆ. ಹಾಲಿನ ದರವಂತು ಏರುತ್ತಲೇ ಇದೆ. ಈಗ ನೋಡಿದ್ರೆ ತುಪ್ಪದ ಬೆಲೆಯೂ ಏರಿಕೆಯಾಗಿದೆ. ಸಾಮಾನ್ಯ ಜನ ದುಡಿಯುವ ಹಣವೆಲ್ಲಾ ಬಾಡಿಗೆ, ಆಹಾರ ಪದಾರ್ಥಗಳಿಗೇನೆ ಸಮವಾಗುತ್ತಿದೆ. ಈ ಬೇಸರ ಗೃಹಿಣಿಯರಿಗೆ ಇದೆ. ಎಲ್ಲರ ಮನೆಯಲ್ಲಿಯೂ ತುಪ್ಪವನ್ನ ಬಳಸಿಯೇ ಬಳಸುತ್ತಾರೆ ಒಂದೆರಡು ರೂಪಾಯಿ ಏರಿಕೆಯಾಗಿದ್ದರೆ ಜನ ಹೇಗೋ ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ದಿಢೀರನೇ 90 ರೂಪಾಯಿ ಏರಿಕೆಯಾದರೆ ಸಹಿಸಿಕೊಳ್ಳುವುದು ಹೇಗೆ ಜನ.

