Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಳೆ ಬ್ರಿಟನ್ ಪ್ರಧಾನಿ ಹುದ್ದೆಗೆ ಕೀರ್ ಸ್ಟಾರ್ಮರ್ ರಾಜೀನಾಮೆ ಸಾಧ್ಯತೆ : ವರದಿ

---Advertisement---

ಲಂಡನ್.ಜೂನ್.21: ತೀವ್ರ ಆಂತರಿಕ ನಾಯಕತ್ವ ಬಿಕ್ಕಟ್ಟು ಹಾಗೂ ಸಾರ್ವಜನಿಕ ಬೆಂಬಲದ ಕುಸಿತದಿಂದ ಕಂಗೆಟ್ಟಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಜೂನ್ 22ರ ಸೋಮವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಬ್ರಿಟನ್‌ನ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

ಬ್ರಿಟನ್‌ನ ಪ್ರಖ್ಯಾತ ಪತ್ರಿಕೆ ‘ದಿ ಅಬ್ಸರ್ವರ್’ ವರದಿಯ ಪ್ರಕಾರ, ಸ್ಟಾರ್ಮರ್ ಅವರು ಸೋಮವಾರವೇ ರಾಜೀನಾಮೆ ಘೋಷಿಸಿ, ಅಧಿಕಾರದಿಂದ ಕೆಳಗಿಳಿಯುವ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ತಮ್ಮ ಅಧಿಕೃತ ಗ್ರಾಮೀಣ ನಿವಾಸವಾದ ‘ಚೆಕರ್ಸ್’ನಲ್ಲಿ ಪತ್ನಿಯೊಂದಿಗೆ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿರುವ ಸ್ಟಾರ್ಮರ್, ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಆದರೆ, ಲೇಬರ್ ಪಕ್ಷದ ಹಿರಿಯ ನಾಯಕರು ಸೋಮವಾರವೇ ಅವರ ಭವಿಷ್ಯದ ಕುರಿತು ಸ್ಪಷ್ಟ ಹೇಳಿಕೆ ಹೊರಬೀಳಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.

ಜುಲೈ 2024 ರಲ್ಲಿ ಬರೋಬ್ಬರಿ 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತಕ್ಕೆ ಮುಕ್ತಿ ಹಾಡಿ, ಲೇಬರ್ ಪಕ್ಷಕ್ಕೆ ಅಭೂತಪೂರ್ವ ಜಯ ತಂದುಕೊಟ್ಟ ಕೀರ್ ಸ್ಟಾರ್ಮರ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕೇವಲ ಎರಡೇ ವರ್ಷಗಳಲ್ಲಿ ಅವರ ಜನಪ್ರಿಯತೆ ಪಾತಾಳಕ್ಕೆ ಕುಸಿದಿದೆ. ಸರಣಿ ಹಗರಣಗಳು ಮತ್ತು ನೀತಿಗಳ ಮೇಲಿನ ಗೊಂದಲದ ನಿರ್ಧಾರಗಳು ಜನಸಾಮಾನ್ಯರಲ್ಲಿ ಅವರ ಮೇಲಿದ್ದ ನಂಬಿಕೆಯನ್ನು ಹುಸಿಗೊಳಿಸಿವೆ.

ಶುಕ್ರವಾರ ನಡೆದ ಸಂಸತ್ ಉಪಚುನಾವಣೆಯಲ್ಲಿ ಸ್ಟಾರ್ಮರ್ ಅವರ ಬದ್ಧ ವೈರಿ ಎಂದೇ ಬಿಂಬಿತವಾಗಿರುವ ಆಂಡಿ ಬರ್ನ್‌ಹ್ಯಾಮ್ ಅವರು ಭರ್ಜರಿ ಜಯ ಸಾಧಿಸಿ ಸಂಸತ್ ಪ್ರವೇಶಿಸಿರುವುದು ಪ್ರಧಾನಿಗೆ ಅಂತಿಮ ಪೆಟ್ಟು ನೀಡಿದಂತಾಗಿದೆ. ಈ ಗೆಲುವಿನ ಬೆನ್ನಲ್ಲೇ ಬರ್ನ್‌ಹ್ಯಾಮ್ ಅವರು ಅಧಿಕೃತವಾಗಿ ನಾಯಕತ್ವದ ಸವಾಲು ಎಸೆಯಲು ಸಜ್ಜಾಗಿದ್ದಾರೆ.

56 ವರ್ಷದ ಹಿರಿಯ ರಾಜಕಾರಣಿ ಬರ್ನ್‌ಹ್ಯಾಮ್ ಅವರನ್ನು ಲೇಬರ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ. ನೈಜೆಲ್ ಫರಾಜ್ ಅವರ ಬಲಪಂಥೀಯ ಜನಪ್ರಿಯ ಪಕ್ಷದ ತೀವ್ರ ಪೈಪೋಟಿಯ ನಡುವೆಯೂ ಬರ್ನ್‌ಹ್ಯಾಮ್ ಜಯಭೇರಿ ಬಾರಿಸಿದ್ದಾರೆ. ತಮ್ಮ ವಿಜಯದ ಭಾಷಣದಲ್ಲಿ ದೇಶಕ್ಕೆ ಹೊಸ ಹಾದಿ ತೋರಿಸುವುದಾಗಿ ಅವರು ಭರವಸೆ ನೀಡಿದ್ದು, ತಕ್ಷಣವೇ ಅಧಿಕಾರ ಹಸ್ತಾಂತರಿಸುವಂತೆ ಅವರ ಬೆಂಬಲಿಗರು ಸ್ಟಾರ್ಮರ್‌ ಗೆ ಒತ್ತಡ ಹೇರಿದ್ದಾರೆ.

ಹದಿಹರೆಯದಲ್ಲೇ ಲೇಬರ್ ಪಕ್ಷ ಸೇರಿದ ಬರ್ನ್‌ಹ್ಯಾಮ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿ 2001 ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಒಂದೂವರೆ ದಶಕಗಳ ಕಾಲ ಸಂಸದರಾಗಿದ್ದ ಅವರು ಟೋನಿ ಬ್ಲೇರ್ ಮತ್ತು ಗಾರ್ಡನ್ ಬ್ರೌನ್ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2010 ಮತ್ತು 2015 ರಲ್ಲಿ ಲೇಬರ್ ಪಕ್ಷದ ನಾಯಕತ್ವದ ರೇಸ್‌ನಲ್ಲಿದ್ದರಾದರೂ ಜಯ ಸಿಕ್ಕಿರಲಿಲ್ಲ.

2017 ರಿಂದ ಗ್ರೇಟರ್ ಮ್ಯಾಂಚೆಸ್ಟರ್‌ ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬರ್ನ್‌ಹ್ಯಾಮ್, ಅಲ್ಲಿನ ಕೈಗಾರಿಕಾ ಪ್ರದೇಶಗಳನ್ನು ಆಧುನೀಕರಿಸಿ ಆಕಾಶಚುಂಬಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಗರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಅಲ್ಲದೆ, ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕ ನಿಯಂತ್ರಣಕ್ಕೆ ತಂದು ‘ಬೀ ನೆಟ್‌ವರ್ಕ್’ (Bee Network) ಎಂಬ ಸುಧಾರಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಉತ್ತರ ಇಂಗ್ಲೆಂಡ್‌ ನ ಹಿತರಕ್ಷಣೆಗಾಗಿ ಸದಾ ಧ್ವನಿ ಎತ್ತುವ ಮತ್ತು ಅವರ ರಾಜಕೀಯ ಮಹತ್ವಾಕಾಂಕ್ಷೆಯ ಕಾರಣದಿಂದಾಗಿ ಅವರನ್ನು ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಪ್ರೇರಣೆಯೊಂದಿಗೆ ‘ಕಿಂಗ್ ಆಫ್ ದಿ ನಾರ್ತ್’ (ಉತ್ತರದ ರಾಜ) ಎಂದು ಕರೆಯಲಾಗುತ್ತದೆ.ಕ್ಯಾಬಿನೆಟ್ ಸಚಿವರು, ಸಲಹೆಗಾರರು, ದೇಣಿಗೆದಾರರು ಮತ್ತು ಕಾರ್ಮಿಕ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಧಾನಿ ಕೀರ್ ಸ್ಟಾರ್ಮರ್ ಅವರು, ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಇನ್ನು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ‘ದಿ ಅಬ್ಸರ್ವರ್’ ವರದಿ ಮಾಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now