ಬೆಂಗಳೂರು: ಎನ್‌ಸಿಇಆರ್‌ಟಿ (NCERT) ಮತ್ತು ಸಿಬಿಎಸ್‌ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮಹತ್ವದ ಸ್ಪಷ್ಟನೆ ನೀಡಿದೆ. ಪಠ್ಯಪುಸ್ತಕಗಳ ಹೆಸರು, ಆಹಾರ ಸಂಬಂಧಿತ ಪಾಠಗಳು ಹಾಗೂ ಪ್ರಾದೇಶಿಕ ಅಂಶಗಳ ಕುರಿತು ವ್ಯಕ್ತವಾಗಿದ್ದ ಟೀಕೆಗಳಿಗೆ ಸಂಸ್ಥೆ ಉತ್ತರ ನೀಡಿದೆ.
6ನೇ ತರಗತಿಯ ಕನ್ನಡ R3 ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರು ನೀಡಿರುವುದು ಧಾರ್ಮಿಕ ಉದ್ದೇಶದಿಂದಲ್ಲ ಎಂದು NCERT ತಿಳಿಸಿದೆ. ಈ ಹೆಸರು ಕರ್ನಾಟಕದ ಪ್ರಮುಖ ನದಿಯಾದ ಕೃಷ್ಣಾ ನದಿಯಿಂದ ಪ್ರೇರಿತವಾಗಿದ್ದು, ದೇಶದ ವಿವಿಧ ಭಾಷೆಗಳ ಪಠ್ಯಪುಸ್ತಕಗಳಿಗೆ ಪ್ರಮುಖ ನದಿಗಳ ಹೆಸರನ್ನೇ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಹಿಂದಿ ಪಠ್ಯಪುಸ್ತಕಕ್ಕೆ ‘ಗಂಗಾ’, ಇಂಗ್ಲಿಷ್‌ಗೆ ‘ಕಾವೇರಿ’, ಉರ್ದುವಿಗೆ ‘ಜಮುನಾ’ ಹಾಗೂ ಕನ್ನಡಕ್ಕೆ ‘ಕೃಷ್ಣ’ ಎಂಬ ಹೆಸರು ಇಡಲಾಗಿದೆ ಎಂದು ಹೇಳಿದೆ.
ಇದೇ ವೇಳೆ, ಆಹಾರ ಪದ್ಧತಿ ಕುರಿತ ವಿವಾದಕ್ಕೂ NCERT ಸ್ಪಷ್ಟನೆ ನೀಡಿದೆ. 6ನೇ ತರಗತಿಯ ‘Health is Wealth’ ಅಧ್ಯಾಯದಲ್ಲಿ ಆರೋಗ್ಯಕರ ಮತ್ತು ಸಮತೋಲನ ಆಹಾರದ ಮಹತ್ವವನ್ನು ಮಾತ್ರ ವಿವರಿಸಲಾಗಿದೆ. ಹಾಲು, ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಉಲ್ಲೇಖವಿದ್ದು, ಪಠ್ಯದಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರದ ಪರ-ವಿರೋಧದ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಪುಟ 63ರಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಒಳಗೊಂಡಿರುವ ಚಿತ್ರವಿದ್ದು, ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರದ ಕುರಿತು ಅರಿವು ಮೂಡಿಸುವುದೇ ಅಧ್ಯಾಯದ ಉದ್ದೇಶವಾಗಿದೆ ಎಂದು NCERT ಹೇಳಿದೆ.ಇದಲ್ಲದೆ, ಹೊಸ ಪಠ್ಯಪುಸ್ತಕಗಳು ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE 2023) ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದ್ದು, ಸ್ಥಳೀಯತೆ ಮತ್ತು ಸಾಂಸ್ಕೃತಿಕ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಗುಣಮಟ್ಟದ ಶಿಕ್ಷಣ ನೀಡುವ ಬದ್ಧತೆಯನ್ನು ಪುನರುಚ್ಚರಿಸಿರುವ NCERT, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸದಾ ಸ್ವಾಗತಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.








