Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯಪಾಲರ ನಡೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣ ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ಕರ್ನಾಟಕ ವಿರೋಧಿ ರಾಜ್ಯಪಾಲರ ನಡೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ಸರ್ಕಲ್‍ನಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್ ಮಾತನಾಡಿ ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿರುವ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಕರ್ನಾಟಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿರುವುದನ್ನು ಮರು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಪತ್ರ ಬರೆದಿರುವುದರ ಹಿಂದೆ ಕರ್ನಾಟಕದಲ್ಲಿ ಕಡ್ಡಾಯವಾಗಿ ಹಿಂದಿ ಹೇರಿಕೆ ಹುನ್ನಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ಅವಮಾನವಾಗುವ ರೀತಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರಿಗೆ ಒಂದು ನಿಮಿಷವು ಅಧಿಕಾರಲ್ಲಿರುವ ನೈತಿಕತೆಯಿಲ್ಲ. ಕೇಂದ್ರ ಸರ್ಕಾರ ಕೂಡಲೆ ಹಿಂದಕ್ಕೆ ಕರೆಸಿಕೊಳ್ಳಬೇಕು. ರಾಜ್ಯಾಡಳಿತದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿರುವ ಇಂತಹ ಕನ್ನಡ ವಿರೋಧಿ ಥಾವರ್‍ಚಂದ್ ಗೆಹ್ಲೋಟ್ ಹಿಂದಿ ಮಾಫಿಯಗಳ ಪರವಾಗಿ ನಿಂತಂತಿದೆ. ಕೂಡಲೆ ವಜಾಗೊಳಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಟಿ.ರಮೇಶ್ ಎಚ್ಚರಿಸಿದರು.

 

ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ವಿಶೇಷ ಕಾಳಜಿ ವಹಿಸಿ ಪ್ರತಿಕ್ರಿಯಿಸಿರುವ ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದೇ ದೊಡ್ಡ ದುರಂತ. ಕರ್ನಾಟಕಕ್ಕೆ ವಲಸೆ ಬರುತ್ತಿರುವ ಹಿಂದಿ ಭಾಷಿಕರಿಗೆ ಸುರಕ್ಷಿತ ಸ್ವರ್ಗವನ್ನಾಗಿಸುವ ದೂರಗಾಮಿ ಉದ್ದೇಶಗಳನ್ನಿಟ್ಟುಕೊಂಡು ರಾಜ್ಯಪಾಲರು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕರ್ನಾಟಕದ ಶಿಕ್ಷಣ ನೀತಿಯನ್ನು ತೀರ್ಮಾನಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಅನಗತ್ಯವಾಗಿ ಹಸ್ತಕ್ಷೇಪ ರಾಜ್ಯಪಾಲರಿಗೆ ಸಲ್ಲದು. ಸಂವಿಧಾನದಲ್ಲಿ ಈ ಅವಕಾಶವಿಲ್ಲ ಎನ್ನುವುದನ್ನು ಮೊದಲು ಅರ್ಥಮಾಡಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ಕನ್ನಡಿಗರ ಹಿತದೃಷ್ಟಿಗೆ ವಿರುದ್ದವಾಗಿ ಯಾರು ಏನೆ ಹೇಳಿದರೂ ರಾಜ್ಯ ಸರ್ಕಾರ ಪರಿಗಣಿಸಬೇಕಿಲ್ಲ ಎಂದು ಟಿ.ರಮೇಶ್ ಆಗ್ರಹಿಸಿದರು.

 

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎಂ.ವಿಜಯಕುಮಾರ್, ತಾಲ್ಲೂಕು ಅಧ್ಯಕ್ಷ ಜಿ.ರಾಜಪ್ಪ, ನಗರಾಧ್ಯಕ್ಷ ಪಿ.ರಮೇಶ್, ಪ್ರಧಾನ ಸಂಚಾಲಕ ಎಸ್.ಪಿ.ಗಣೇಶ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನೀಲಕಂಠ, ಯುವ ಘಟಕದ ಅಧ್ಯಕ್ಷ ಘನಶ್ಯಾಮ, ಜಿಲ್ಲಾ ಸಂಚಾಲಕ ಪ್ರಸಾದ್ ಮಲ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ್, ರಾಮಕೃಷ್ಣಪ್ಪ, ವೆಂಕಟೇಶ್, ಎಂ.ಹೆಚ್.ಮಂಜುನಾಥ್, ದಾದಾಪೀರ್, ಗೋ.ಬಸವರಾಜ, ಜಾಕೀರ್, ಚಂದ್ರಕಲಾ, ಮಂಜುಳ, ದಾಕ್ಷಾಯಿಣಿ, ರಾಮು, ಜಯಲಕ್ಷ್ಮಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now