ಕೆ.ಅನ್ವರ್ ಭಾಷಾ ಅವರು ವಕ್ಫ್ ಮಂಡಳಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಚಿತ್ರದುರ್ಗ ಜಿಲ್ಲೆಗೆ ಸಂದ ಕೀರ್ತಿ : ಇಲ್ಯಾಸ್‍ವುಲ್ಲಾ ಶರೀಫ್

suddionenews
2 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 23 : ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ನನ್ನನ್ನು ಸನ್ಮಾನಿಸಿ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಹೊರಿಸಿದ್ದೀರ. ಹುದ್ದೆಗೆ ಕಳಂಕ ಬರದಂತೆ ನಿಭಾಯಿಸುತ್ತೇನೆಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಕೆ.ಅನ್ವರ್‍ಭಾಷ ವಾಗ್ದಾನ ಮಾಡಿದರು. 

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸೈಫುದ್ದಿನ್ ಕೂಡ ಈ ಹುದ್ದೆಯಲ್ಲಿದ್ದರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ವಕ್ಫ್ ಮಂಡಳಿಗೆ ಅಧ್ಯಕ್ಷರನ್ನು ನಾಮಿನೇಟ್ ಮಾಡುತ್ತಿದ್ದರು. ಈಗ ನಡೆದ ಚುನಾವಣೆಯಲ್ಲಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಿಸ್ಪಕ್ಷಪಾತವಾಗಿ ಕೆಲಸ ಮಾಡುತ್ತೇನೆ. ಸನ್ಮಾನ ಮಾಡಿಸಿಕೊಳ್ಳುವುದು ಸುಲಭ. ಅದರ ಹಿಂದೆ ಜವಾಬ್ದಾರಿಯಿದೆ. ರೈಲ್ವೆ ಮಂತ್ರಿಯಾಗಿದ್ದ ಸಿ.ಕೆ.ಜಾಫರ್‍ಷರೀಪ್ ಪ್ರಥಮವಾಗಿ ಚಿತ್ರದುರ್ಗ ಜಿಲ್ಲಾ ಸಲಹಾ ಸಮಿತಿ ಸದಸ್ಯನಾಗಿ ನೇಮಕ ಮಾಡಿದ್ದರು ಎನ್ನುವುದನ್ನು ಸ್ಮರಿಸಿದರು.

ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‍ವುಲ್ಲಾ ಶರೀಫ್ ಮಾತನಾಡಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರಾಗಿರುವ ಡಾ.ಕೆ.ಅನ್ವರ್‍ಭಾಷ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜವಾಗಿಯೂ ಚಿತ್ರದುರ್ಗ ಜಿಲ್ಲೆಗೆ ಸಂದ ಕೀರ್ತಿ. ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಭಿವೃದ್ದಿಯತ್ತ ಸಾಗುತ್ತಿದೆ. ಇದರ ಹಿಂದೆ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣನವರ ಪರಿಶ್ರಮವಿದೆ ಎಂದು ಗುಣಗಾನ ಮಾಡಿದರು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿರುವ ಡಾ.ಕೆ.ಅನ್ವರ್‍ಭಾಷರವರು ಅಲ್ಪಸಂಖ್ಯಾತರನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶುಭ ಹಾರೈಸಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಸನ್ಮಾನಿಸಿ ಮಾತನಾಡುತ್ತ ಡಾ.ಕೆ.ಅನ್ವರ್‍ಭಾಷ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದು ನಮಗೆಲ್ಲಾ ಸಂತೋಷವಾಗಿದೆ. ಡಿ.ಸಿ.ಸಿ. ಬ್ಯಾಂಕ್ 1200 ಕೋಟಿ ರೂ.ಗಳ ವಹಿವಾಟು ನಡೆಸಿ ಭಾರತದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ಹದಿನೆಂಟು ವರ್ಷಗಳಿಂದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷನಾಗಿ ನಾನು 600 ಮಂದಿ ಅಲ್ಪಸಂಖ್ಯಾತರಿಗೆ ಸದಸ್ಯತ್ವ ನೀಡಿದ್ದೇನೆ. ಎರಡು ಕೋಟಿ ರೂ. ಬಿಲ್ಡಿಂಗ್ ಕಟ್ಟಿಸಿದ್ದೇನೆ. ಹಾಗಾಗಿ ಇನ್ನು ಹೆಚ್ಚಿನ ಅಭಿವೃದ್ದಿಯಾಗಬೇಕಾಗಿರುವುದರಿಂದ ಅಲ್ಪಸಂಖ್ಯಾತರ ಇಲಾಖೆ ಮೂಲಕ ಸೊಸೈಟಿಗೆ ಕಡಿಮೆ ಬಡ್ಡಿ ದರದಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನ ಪೂರೈಸಿರುವುದು ಹೆಮ್ಮೆಯ ಸಂಗತಿ. ಇಲ್ಲಿ ಎಲ್ಲಾ ಜಾತಿ ಧರ್ಮದ ಸದಸ್ಯರುಗಳಿದ್ದಾರೆ. ಪೂರ್ವಜರು ಆರಂಭಿಸಿರುವ ಸೊಸೈಟಿಗೆ ಕೇಂದ್ರದ ರೈಲ್ವೆ ಮಂತ್ರಿಯಾಗಿದ್ದವರು ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಸದಸ್ಯರಾಗಿದ್ದರು ಎನ್ನುವುದೆ ಹೆಗ್ಗಳಿಕೆ. ಅಲ್ಪಸಂಖ್ಯಾತರ ಇಲಾಖೆಯಿಂದ ಏನೆಲ್ಲಾ ಸೌಲಭ್ಯಗಳಿವೆಯೋ ಅವನ್ನೆಲ್ಲಾ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಡಾ.ಕೆ.ಅನ್ವರ್‍ಭಾಷರವರಲ್ಲಿ ವಿನಂತಿಸಿದರು.

ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಸಿ.ಓ. ಬಾಬು, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ವೇದಿಕೆಯಲ್ಲಿದ್ದರು.  ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ಮಹಮದ್ ನಯೀಂ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಡಿ.ಎನ್.ಮೈಲಾರಪ್ಪ, ಹೆಚ್.ಸಿ.ನಿರಂಜನಮೂರ್ತಿ, ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್.ಮಲ್ಲಿಕಾರ್ಜುನ್, ವಲಿಖಾದ್ರಿ, ಎ.ಬಿ.ಸಿ.ಅನ್ವರ್ ಸೇರಿದಂತೆ ಸೊಸೈಟಿ ಸಿಬ್ಬಂದಿಗಳು ಸನ್ಮಾನ ಸಮಾರಂಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *