ಇಂದಿನ ಆಧುನಿಕ ಯುಗದಲ್ಲಿ ಜನರು ಗಂಟೆಗಟ್ಟಲೆ ಡೆಸ್ಕ್ ಮುಂದೆ ಕುಳಿತು, ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಾ ಅಥವಾ ಪ್ರಯಾಣದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇಂತಹ ನಿಷ್ಕ್ರಿಯ ಜೀವನಶೈಲಿಯು ದೇಹವನ್ನು ದಿನೇ ದಿನೇ ದೌರ್ಬಲ್ಯಕ್ಕೀಡು ಮಾಡುತ್ತಿದೆ. ಇದು ಸುಸ್ತು, ಆಯಾಸವನ್ನು ಹೆಚ್ಚಿಸುವುದಲ್ಲದೆ ಬೊಜ್ಜು, ಮಧುಮೇಹ (ಡಯಾಬಿಟಿಸ್) ಮತ್ತು ಹೃದಯ ರೋಗಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತಂದೊಡ್ಡುತ್ತಿದೆ.
ಆದರೆ, ದಿನವಿಡೀ ಆರೋಗ್ಯವಾಗಿರಲು ನೀವು ಜಿಮ್ ಗೇ ಹೋಗಬೇಕಾಗಿಲ್ಲ. ಪ್ರತಿದಿನ ಕೇವಲ 30 ನಿಮಿಷಗಳ ಕಾಲ ನಿಯಮಿತವಾಗಿ ನಡೆದರೆ ಸಾಕು, ನಿಮ್ಮ ದೇಹದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು. ಆ ಆರೋಗ್ಯ ಪ್ರಯೋಜನಗಳು ಇಲ್ಲಿವೆ.
ಹೃದಯದ ಆರೋಗ್ಯಕ್ಕೆ ಬೆಸ್ಟ್
ದಿನವೂ ಪಾದಯಾತ್ರೆ ಅಥವಾ ವಾಕಿಂಗ್ ಮಾಡುವುದರಿಂದ ರಕ್ತ ಪರಿಚಲನೆ (Blood Circulation) ಸುಧಾರಿಸುತ್ತದೆ. ಇದು ಹೃದಯದ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಿ, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ.
ತೂಕ ನಿಯಂತ್ರಣಕ್ಕೆ ಸಹಕಾರಿ
ನಡೆಯುವುದರಿಂದ ದೇಹದ ಕ್ಯಾಲೊರಿಗಳು ಬರ್ನ್ ಆಗುತ್ತವೆ ಮತ್ತು ಮೆಟಬಾಲಿಸಂ (ಚಯಾಪಚಯ ಕ್ರಿಯೆ) ಹೆಚ್ಚುತ್ತದೆ. ಇದು ಆರೋಗ್ಯಕರವಾಗಿ ತೂಕವನ್ನು ಇಳಿಸಿಕೊಳ್ಳಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.
ಮೂಳೆ ಮತ್ತು ಸ್ನಾಯುಗಳ ಬಲವರ್ಧನೆ
ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹದ ಕೆಳಭಾಗದ ಸ್ನಾಯುಗಳು ಬಲಗೊಳ್ಳುತ್ತವೆ ಹಾಗೂ ಮೂಳೆಗಳ ಸಾಂದ್ರತೆ ಹೆಚ್ಚಿ ಅವು ಗಟ್ಟಿಯಾಗುತ್ತವೆ.

ಒತ್ತಡ ಮತ್ತು ಆತಂಕದಿಂದ ಮುಕ್ತಿ
ದೈಹಿಕ ಚಟುವಟಿಕೆಯಲ್ಲಿ ತೊಡಗಿದಾಗ ಮೆದುಳಿನಲ್ಲಿ ‘ಫೀಲ್-ಗುಡ್’ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಇವು ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಿ ಮೂಡ್ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತವೆ.
ದಿನವಿಡೀ ಎನರ್ಜಿಟಿಕ್!
ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಆಯಾಸ ಕಡಿಮೆಯಾಗಿ, ದಿನವಿಡೀ ಚುರುಕಾಗಿ ಮತ್ತು ಶಕ್ತಿಯುತವಾಗಿರಲು (Energy Level) ಸಹಾಯ ಮಾಡುತ್ತದೆ.
ಉತ್ತಮ ನಿದ್ದೆ ನಿಮ್ಮದಾಗುತ್ತೆ
ನಿಯಮಿತವಾಗಿ ವಾಕಿಂಗ್ ಮಾಡುವ ಅಭ್ಯಾಸ ಉಳ್ಳವರಿಗೆ ರಾತ್ರಿ ವೇಳೆ ಯಾವುದೇ ತೊಂದರೆಯಿಲ್ಲದೆ ನಿಮ್ಮ ನೆಮ್ಮದಿಯ ಮತ್ತು ಆಳವಾದ ನಿದ್ದೆ ಬರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಊಟದ ನಂತರ ಅಥವಾ ದಿನದಲ್ಲಿ ಸ್ವಲ್ಪ ಸಮಯ ನಡೆಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ ಮತ್ತು ಕರುಳಿನ ಆರೋಗ್ಯ ವೃದ್ಧಿಯಾಗುತ್ತದೆ.
ಎಲ್ಲರಿಗೂ ಸೂಕ್ತವಾದ ಸರಳ ವ್ಯಾಯಾಮ
ಇದು ಅತ್ಯಂತ ಕಡಿಮೆ ಶ್ರಮದ (Low-impact) ವ್ಯಾಯಾಮವಾಗಿರುವುದರಿಂದ, ಯಾವುದೇ ವಯಸ್ಸಿನವರಾದರೂ (ಚಿಕ್ಕವರಿಂದ ಹಿಡಿದು ವೃದ್ಧರವರೆಗೆ) ಸುಲಭವಾಗಿ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬಹುದು.
ವಾಕಿಂಗ್ ಮಾಡಲು ಸರಿಯಾದ ಕ್ರಮ ಯಾವುದು?
ನಿಮಗೆ ವಾಕಿಂಗ್ ನ ಪೂರ್ಣ ಲಾಭ ಸಿಗಬೇಕಾದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿ:
ನಡೆಯುವಾಗ ನಿಮ್ಮ ಬೆನ್ನು ಮತ್ತು ದೇಹವನ್ನು ನೇರವಾಗಿ ಇಟ್ಟುಕೊಳ್ಳಿ.
ಕೆಳಗೆ ನೋಡಿ ನಡೆಯುವ ಬದಲು, ಮುಖವನ್ನು ನೇರವಾಗಿಟ್ಟು ಮುಂಭಾಗವನ್ನು ವೀಕ್ಷಿಸಿ.
ಆರಂಭದಲ್ಲಿ ನಿಧಾನವಾಗಿ ನಡೆದು, ನಂತರ ಕ್ರಮೇಣ ವೇಗವನ್ನು (Speed) ಹೆಚ್ಚಿಸಿ.
ನಡೆಯುವಾಗ ನಿಮ್ಮ ಕೈಗಳನ್ನು ಸ್ವಾಭಾವಿಕವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿ.
ಮುಖ್ಯವಾಗಿ, ಆರಾಮದಾಯಕವಾದ ಬಟ್ಟೆ ಮತ್ತು ಕಾಲಿಗೆ ಉತ್ತಮ ಗ್ರಿಪ್ ಹಾಗೂ ಸಪೋರ್ಟ್ ನೀಡುವ ಶೂಗಳನ್ನು ಧರಿಸಿ.
ವಾಕಿಂಗ್ ಮಾಡಲು ಅತ್ಯುತ್ತಮ ಸಮಯ ಯಾವುದು?
ಸಾಮಾನ್ಯವಾಗಿ ಬೆಳಗಿನ ಜಾವ ಮತ್ತು ಸಂಜೆಯ ಸಮಯವನ್ನು ವಾಕಿಂಗ್ ಮಾಡಲು ಅತ್ಯಂತ ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ವಾತಾವರಣವು ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ, ಇದು ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ.





















