ಸುದ್ದಿಒನ್, ಚಿತ್ರದುರ್ಗ, ಮೇ. 31 : ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಸಸಿಗಳನ್ನು ನೆಡುವ ಮುಖಾಂತರ ಪರಿಸರ ದಿನವನ್ನು ಆಚರಣೆ ಮಾಡುತ್ತಾರೆ. ಪರಿಸರವನ್ನು ಬೆಳೆಸಲು ನಾನಾ ರೀತಿಯಲ್ಲಿ ಪರಿಸರವನ್ನು ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇದರಲ್ಲಿ ಪ್ರಮುಖವಾಗಿ ಕಾಡನ್ನು ಉಳಿಸುವುದು, ಗಿಡಗಳನ್ನು ನೆಡುವುದು ಹಾಗೂ ಬೀಜದ ಉಂಡೆಗಳನ್ನು ಹಾಕುವ ಮುಖಾಂತರ ಪರಿಸರವನ್ನು ಕಾಪಾಡಬಹುದಾಗಿದೆ. ಅದರಲ್ಲೂ ಮುಂಗಾರು ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಈ ಬಾರಿ ಇಂತಹದ್ದೊಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಾಗತಿಕ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಈ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಾವುಗಳು ಎಲ್ಲರೂ ಸಹ ಒಂದಾಗಿ ಸೇರಿ ಪರಿಸರವನ್ನು ಕಾಪಾಡಿ, ಕಾಡು ಬೆಳೆಸಿ ನಾಡನ್ನು ಉಳಿಸಬೇಕಾಗಿ ಪಣ ತೊಡಬೇಕಾಗಿದೆ. ಅಷ್ಟೇ ಅಲ್ಲದೆ, ನಮ್ಮ ಮನೆಯ ಸುತ್ತಮುತ್ತಲು ಖಾಲಿ ಇರುವ ಜಾಗದಲ್ಲಿ ಸುಮಾರು 10 ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕಾದ ಅಗತ್ಯವಿದೆ.
ಸಾಮಾನ್ಯವಾಗಿ ಈ ಬೇಸಿಗೆಯ ರಜಾ ದಿನಗಳ ಸಂದರ್ಭದಲ್ಲಿ ಎಲ್ಲಾ ಮಕ್ಕಳು ರಜೆ ಮಜಾ ಮಾಡುವ ಮುಖಾಂತರ ಸಮಯ ಕಾಲ ಹರಣ ಮಾಡುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ, ಎಸ್ ಆರ್ ಎಸ್ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯ 9ನೇ ತರಗತಿಯ ಸ್ಕೌಟ್ ವಿದ್ಯಾರ್ಥಿ ಜೀವನ್ ಎಂ ಎಸ್ ಹಾಗೂ ಮೈಸೂರಿನ ವಿವೇಕಾನಂದ ಸೈನಿಕ್ ಸ್ಕೂಲ್ ವಿದ್ಯಾರ್ಥಿಯಾದ ಸಿಂಚನ ಎಂ ಎಸ್ ಇವರುಗಳು ಮಾದರಿಯಾಗಿದ್ದಾರೆ.
ಇವರುಗಳು ಹಲವು ಬಾರಿ ಚಾರಣ ಮಾಡಿದ ಸಂದರ್ಭದಲ್ಲಿ ಹಾಗೂ ನಾಡಿನಲ್ಲಿ ಸಿಗುವ ಬೇವಿನ ಬೀಜ, ಹಳಸಿನ ಬೀಜ, ನೇರಳೆ ಹಣ್ಣಿನ ಬೀಜ, ಮಾವಿನ ಬೀಜ, ಹುಣಸೆ ಹಣ್ಣಿನ ಬೀಜ ಹಾಗೂ ಇನ್ನಿತರ ಕಾಡಿನಲ್ಲಿ ಸಿಗುವ ಬೇಟೆ ಕಾಯಿ ಬೀಜಗಳನ್ನು ಸಂಗ್ರಹಿಸಿದ್ದರು. ಆ ಬೀಜಗಳನ್ನು ಮನೆಗೆ ತಂದು, ಅದರ ಜೊತೆಗೆ ಕೆಮ್ಮಣ್ಣು ಹಾಗೂ ದನದ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಸುಮಾರು 1000 ಬೀಜದ ಉಂಡೆಗಳನ್ನು ತಯಾರು ಮಾಡಿದ್ದಾರೆ.
ಹೀಗೆ ಸಿದ್ಧಪಡಿಸಿದ ಬೀಜದ ಉಂಡೆಗಳನ್ನು ಜೋಗಿಮಟ್ಟಿ, ಆಡುಮಲ್ಲೇಶ್ವರ ಹಾಗೂ ಚಂದ್ರವಳ್ಳಿಯ ಭಾಗದಲ್ಲಿ ತೇವಾಂಶ ಇರುವ ಜಾಗ, ಖಾಲಿ ಜಾಗಗಳು ಹಾಗೂ ಹೊಲದ ಇಕ್ಕೆಲ ಮತ್ತು ಬದುಗಳಲ್ಲಿ ಪಸರಿಸಲಾಯಿತು. ‘ಭೂಮಿ ಗೀತೆ’ ಸಂಸ್ಥೆಯ ಪರಿಸರವಾದಿ ಮಿಠಾಯಿ ಆರ್. ಮುರುಗೇಶ್ ರವರ ಮಾರ್ಗದರ್ಶನದಲ್ಲಿ ಈ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ, ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಪರಿಸರ ವಾಕ್ ಮಾಡುವ ಸಾರ್ವಜನಿಕರಿಗೂ ಸಹ ಈ ಬೀಜದ ಉಂಡೆಗಳ ಬಗ್ಗೆ ಮಾಹಿತಿ ನೀಡಿ, ಅವರ ಮುಖಾಂತರವೂ ಬೀಜಗಳನ್ನು ನೆಡಿಸಿ ಪರಿಸರ ಪ್ರಜ್ಞೆಯನ್ನು ಬೆಳೆಸಲಾಯಿತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೀವನ್ ಎಂ ಎಸ್ – 9449682119.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















