ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 11 : ಜಿಲ್ಲಾಸ್ಪತ್ರೆಯಲ್ಲಿ ಈ ವರ್ಷ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಒಟ್ಟು 2,638 ಹೆರಿಗೆಗಳು ಸಂಭವಿಸಿವೆ. ಈ ಪೈಕಿ 789 ಸಹಜ 1,859 ಸಿಜೇರಿಯನ್ ಹೆರಿಗೆಗಳಾಗಿವೆ. ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿರುವುದಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಧಾರಣೆಯಿಂದ ಹಿಡಿದು ಮಗು ಜನಿಸಿದ ನಂತರವೂ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದ ಕಾಳಜಿ ವಹಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದರ ಮೂಲಕ ತೂಕ ಹೆಚ್ಚಳ, ರಕ್ತಹೀನತೆ, ಅಪೌಷ್ಠಿಕತೆ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗಳು ಹೆಚ್ಚಾಗುತ್ತಿರುವುದು ಏಕೆ ವೈದ್ಯರನ್ನು ಪ್ರಶ್ನಿಸಿದರು.
ಇದೇ ವೇಳೆ, ಪ್ರಸಕ್ತ ವರ್ಷದಲ್ಲಿ ಜಿಲ್ಲಾಸ್ಪತ್ರೆಯಿಂದ 754 ಮೇಜರ್ ಆಪರೇಷನ್, 486 ಟ್ರಾಮಾ ಆಪರೇಷನ್, 441 ಕಣ್ಣಿನ ಶಸ್ತ್ರಚಿಕಿತ್ಸೆ 96 ಇತರೆ ಶಸ್ತ್ರಚಿಕತ್ಸೆಗಳನ್ನು ನಡೆಸಲಾಗಿದೆ. 1,70,020 ಹೊರ ರೋಗಿಗಳು, 22,624 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 2,920 ಸಿ.ಟಿ.ಸ್ಕ್ಯಾನ್, 5,874 ಎಂ.ಆರ್.ಐ ಸ್ಕಾನ್ ಮಾಡಲಾಗಿದೆ. 311 ರೋಗಿಗಳು 2,917 ಸೈಕಲ್‍ಗಳಷ್ಟು ಡಯಾಲಿಸಿಸ್‍ಗೆ ಒಳಪಟ್ಟಿದ್ದಾರೆ. 560 ರೋಗಗಳು ಐ.ಸಿ.ಯುಗೆ ದಾಖಲಾಗಿದ್ದಾರೆ. ಈ ಪೈಕಿ 93 ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. 234 ರೋಗಿಗಳನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೇರೆಡೆಗೆ ಶಿಫಾರಸ್ಸು ಮಾಡಲಾಗಿದೆ. 70 ರೋಗಿಗಳು ಮೃತಪಟ್ಟಿದ್ದಾರೆ. 15,799 ಪ್ರಕರಣಗಳಲ್ಲಿ ಎ.ಬಿ.ಆರ್.ಕೆ. ಕ್ಲೈಮ್ ಸಲ್ಲಿಕೆ ಮಾಡಲಾಗಿದೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ರೋಗಿಗಳು ವಾರಗಟ್ಟಲೇ ಕಾಯುವ ಪರಿಸ್ಥಿತಿ ಇದೆ. ಕೇವಲ 486 ಟ್ರಾಮಾ ಅಪರೇಷನ್‍ಗಳನ್ನು ಮಾಡಲಾಗಿದೆ. ಈ ವಿಭಾಗದಲ್ಲಿ 7 ತಜ್ಞ ವೈದ್ಯರು ಕೆಲಸ ಮಾಡುತ್ತಾರೆ. ಆದರೂ ದಿನಕ್ಕೆ ಕೇವಲ ಸರಾಸರಿ 2 ರಿಂದ 3 ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಮಾಡಲಾಗುತ್ತಿದೆ. ರೋಗಿಗಳ ಮನವಿಗೆ ವೈದ್ಯರು ಸ್ಪಂದಿಸುವುದಿಲ್ಲ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸಭೆಯಲ್ಲಿ ದೂರಿದರು.
ಜಿಲ್ಲಾಸ್ಪತ್ರೆಯ ಮುಂದಿರುವ ರಸ್ತೆಯನ್ನು ಹಾಕರ್ ಹಾಗೂ ಪಾರ್ಕಿಂಗ್‍ಗೆ ಮೀಸಲಿರಿಸಿ, ವಾಹನ ಓಡಾಟ ನಿರ್ಬಂದಿಸಲು ನಗರಸಭೆ ತಿರ್ಮಾನ ಕೈಗೊಳ್ಳಬೇಕು. ಆಸ್ಪತ್ರೆಯ ಮುಂದಿರುವ ಆಟೋ ನಿಲ್ದಾಣಕ್ಕೂ ಬೇರೆಡೆ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಗರಸಭೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಆನಂದ್ ಪ್ರಕಾಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸಿ.ಓ.ಸುಧಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಶೀತಲ್ ಪ್ರಶಾಂತ, ಚಿದಾನಂದ ಸ್ವಾಮಿ, ಹಬೀಬುಲ್ಲಾ, ನಾಗರಾಜ ಸಕ್ಕರೆ, ಎಂ.ಆರ್.ಸಿ. ಮೂರ್ತಿ, ರೆಹಮತ್ ಸೇರಿದಂತೆ ಮತ್ತಿತರರು ಇದ್ದರು.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







