ಚಿತ್ರದುರ್ಗ. ಫೆ.6: ಇಂದಿನ ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದ್ದು, ಶೇ.70 ರಿಂದ 90ರಷ್ಟು ಪ್ರಕರಣಗಳಲ್ಲಿ ಅಪರಿಚಿತರಿಗಿಂತ ಮಗುವಿನ ಕುಟುಂಬಸ್ಥರು, ನೆರೆಹೊರೆಯವರು ಹಾಗೂ ಪರಿಚಿತರೇ ಆರೋಪಿಗಳಾಗಿರುತ್ತಾರೆ ಎಂದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ‘ಮಕ್ಕಳ ಹಕ್ಕುಗಳ ಮತ್ತು ರಕ್ಷಣಾ ಕಾಯ್ದೆಗಳ ಕುರಿತು ಒಂದು ದಿನದ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ಹೆಚ್ಚಿನವುಗಳಲ್ಲಿ ಮಗುವಿನ ತಂದೆ, ಅಣ್ಣ, ಸ್ನೇಹಿತರು, ಶಿಕ್ಷಕರು ಅಥವಾ ನೆರೆಹೊರೆಯವರೇ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ ಎಂದು ತಿಳಿಸಿದ ಅವರು, ಮಕ್ಕಳ ರಕ್ಷಣೆ ಮನೆಯಿಂದಲೇ ಶುರುವಾಗಬೇಕು ಎಂದು ಹೇಳಿದರು.
ಆನ್ಲೈನ್ ಗೇಮ್ಗಳಿಗೆ ದಾಸರಾಗಿ ಇತ್ತೀಚಿಗೆ ಉತ್ತರ ಭಾರತದಲ್ಲಿ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರಸ್ತಾಪಿಸಿದ ಅವರು, ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಪೋಷಕರ ನಡುವಿನ ಕೌಟಂಬಿಕ ಕಲಹದಿಂದ ಸಂಕಷ್ಟಕ್ಕೀಡಾಗಿ ಬಾಲಮಂದಿರ ಸೇರಿರುವ ಮಕ್ಕಳ ಮಾತಸಿಕ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಅಂತಹ ಮಕ್ಕಳಿಗೆ ಕೇವಲ ಕಾನೂನಿನ ರಕ್ಷಣೆಯಲ್ಲದೆ, ಭಾವನಾತ್ಮಕ ಬೆಂಬಲದ ಅವಶ್ಯಕತೆಯಿದೆ ಎಂದು ಸಿಬ್ಬಂದಿಗಳಿಗೆ ತಿಳಿಸಿದರು.
ತುಮಕೂರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಡಾ.ಎಸ್.ಪಿ.ಟವಿಕುಮಾರ್ ಮಾತನಾಡಿ, ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕೇವಲ ಅಧಿಕಾರ ಚಲಾಯಿಸುವುದಲ್ಲ, ಅದು ನೊಂದ ಜೀವಗಳಿಗೆ ಆಸರೆಯಾಗುವ ಪವಿತ್ರ ಸೇವೆಯಾಗಿದೆ. ಇಂದಿನ ದಿನಗಳಲ್ಲಿ ಅನೇಕರು ಉನ್ನತ ಉದ್ದೆಗಳನ್ನು ಬಯಸುತ್ತಾರೆಯೇ ಹೊರತು, ಮಕ್ಕಳ ರಕ್ಷಣಾಧಿಕಾರಿಯಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ, ಮಕ್ಕಳ ರಕ್ಷಣಾ ಘಟಕದಲ್ಲಿ ಕೆಲಸ ಮಾಡುವುದು ಇತರ ಇಲಾಖೆಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆಲಸ ಮಾಡಿದಾಗ ಸಿಗುವ ಆತ್ಮತೃಪ್ತಿ ಮತ್ತು ಪುಣ್ಯ ಬೇರಲ್ಲೂ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗಂಗಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಜಗದೀಶ್, ರಂಗನಾಥ್ ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಇದ್ದರು.












