ಮುಂಬೈ.ಜೂನ್.22: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣಕ್ಕೆ ಮತ್ತೊಂದು ತೀವ್ರ ಆಘಾತ ಎದುರಾಗಿದೆ. ವಸಾಯಿ ಪ್ರದೇಶದಲ್ಲಿ ಶಿವಸೇನಾ ಉದ್ಧವ್ ಬಣದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಕ್ಷ ತೊರೆದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗುವ ಮೂಲಕ ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ವಸಾಯಿ ವೆಸ್ಟ್ನಲ್ಲಿರುವ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಉದ್ಧವ್ ಬಣದ ಶಾಖಾ ಪ್ರಮುಖರು, ವಿಭಾಗೀಯ ಮುಖ್ಯಸ್ಥರು ಮತ್ತು ವಿವಿಧ ಹುದ್ದೆಗಳಲ್ಲಿದ್ದ 50ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಶಾಸಕಿ ಸ್ನೇಹಾ ದುಬೆ ಪಂಡಿತ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಈ ಮಹತ್ವದ ರಾಜಕೀಯ ಬೆಳವಣಿಗೆಯಿಂದಾಗಿ ವಸಾಯಿ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನಾ (UBT) ಪಕ್ಷದ ಸಾಂಸ್ಥಿಕ ಬಲವು ತೀವ್ರವಾಗಿ ಕುಸಿದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರ ರಾಜ್ಯಾದ್ಯಂತ ಉದ್ಧವ್ ಬಣದ ನಾಯಕರು ಮತ್ತು ಕಾರ್ಯಕರ್ತರು ನಿರಂತರವಾಗಿ ಪಕ್ಷವನ್ನು ತೊರೆಯುತ್ತಿರುವುದು, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳಿಗೆ ಸಾಕ್ಷಿಯಾಗಿದೆ.
ಉದ್ಧವ್ ಬಣದ ನಾಯಕರನ್ನು ಸೆಳೆಯಲು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟವು ಹಮ್ಮಿಕೊಂಡಿರುವ ಆಪರೇಷನ್ ಟೈಗರ್ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ್ದರು.
ಮತ್ತೊಂದೆಡೆ, ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಮುಂದಿನ ದಿನಗಳಲ್ಲಿ ಇನ್ನು ಹಲವು ಪ್ರಮುಖ ಬೆಳವಣಿಗೆಗಳು ನಡೆಯಲಿದ್ದು, ಈ ಕಾರ್ಯಾಚರಣೆಯನ್ನು ಫೂಲ್ ಪ್ರೂಫ್ (ಯಾವುದೇ ಲೋಪವಿಲ್ಲದಂತೆ) ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸುಳಿವು ನೀಡಿದ್ದಾರೆ.
ಉದ್ಧವ್ ಬಣಕ್ಕೆ ಶಿಂಧೆ ಟಾಂಗ್
ಇದೇ ವೇಳೆ ಉದ್ಧವ್ ಠಾಕ್ರೆ ಬಣದ ವಿರುದ್ಧ ವಾಗ್ದಾಳಿ ನಡೆಸಿದ ಶಿಂಧೆ, ಹಲವಾರು ತಳಮಟ್ಟದ ಕಾರ್ಯಕರ್ತರು ಹೊರಗಡೆ ಇದ್ದಾಗ ಬಹಿರಂಗವಾಗಿ ಮಾತನಾಡುತ್ತಾರೆ, ಆದರೆ ಒಳಗಡೆ ಹೋದ ತಕ್ಷಣ ತಮ್ಮ ನಾಯಕರ ಕಾಲಿಗೆ ಬೀಳುತ್ತಾರೆ. ಇದೊಂದು ರೀತಿಯ ‘ಕೆಮಿಕಲ್ ಲೋಚಾ’ (ಗೊಂದಲ). ಸಾರ್ವಜನಿಕರು ಸ್ವಲ್ಪ ಸಮಯ ಕಾಯಬೇಕು, ಶೀಘ್ರದಲ್ಲೇ ಮತ್ತಷ್ಟು ಬ್ರೇಕಿಂಗ್ ನ್ಯೂಸ್ಗಳು ಹೊರಬರಲಿವೆ ಎಂದು ಲೇವಡಿ ಮಾಡಿದ್ದಾರೆ.
ನಿರಂತರವಾಗಿ ಎದುರಾಗುತ್ತಿರುವ ಪಕ್ಷಾಂತರ ಮತ್ತು ನಾಯಕರ ವಲಸೆಯು ಮುಂಬರುವ ಚುನಾವಣೆಗಳ ಹೊಸ್ತಿಲಿನಲ್ಲಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















