ಕೈರೋ: ಈಜಿಪ್ಟ್‌ನ ಪ್ರಮುಖ ರಿಂಗ್ ರೋಡ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಗೀಜಾ ಜಿಲ್ಲೆಯ ಅಲ್-ವಾರಾಕ್ ಪ್ರದೇಶದ ಸುರಂಗ ಮಾರ್ಗದ ಮೇಲ್ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಹಲವಾರು ವಾಹನಗಳು ಆಹುತಿಯಾಗಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 27 ವಾಹನಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಸಾರ್ವಜನಿಕ ಅಭಿಯೋಜನಾ ಇಲಾಖೆ (Public Prosecution) ತಿಳಿಸಿದೆ.
ಸಾವು-ನೋವುಗಳ ನಿಖರ ಸಂಖ್ಯೆ ಮತ್ತು ಹಾನಿಯ ಪ್ರಮಾಣವನ್ನು ಇನ್ನೂ ಅಂದಾಜಿಸಲಾಗುತ್ತಿದೆ. ಗುರುತು ಸಿಗದಷ್ಟು ಸುಟ್ಟುಹೋಗಿರುವ ಮೃತದೇಹಗಳ ಗುರುತು ಪತ್ತೆಹಚ್ಚಲು ಡಿಎನ್‌ಎ (DNA) ಮಾದರಿಗಳನ್ನು ಸಂಗ್ರಹಿಸುವಂತೆ ಅಭಿಯೋಜನಾ ಇಲಾಖೆ ಆದೇಶಿಸಿದೆ. ರಕ್ಷಣಾ ಕಾರ್ಯಾಚರಣೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳಕ್ಕೆ 39 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
BREAKING | Egypt’s Health Ministry confirms at least 21 dead and 15 injured after a vehicle carrying petroleum products overturned and caught fire in Giza. pic.twitter.com/J62DUnB7HT
— ME24 – Middle East 24 (@MiddleEast_24) November 25, 2026
ದುರಂತದ ಸ್ಥಳದಿಂದ ದಟ್ಟವಾದ ಹೊಗೆ ಆಗಸಕ್ಕೆ ಚಿಮ್ಮುತ್ತಿರುವ ಹಾಗೂ ಮಿನಿಬಸ್‌ಗಳು, ಕಾರುಗಳು, ಬೈಕ್‌ಗಳು ಸುಟ್ಟು ಕರಕಲಾಗಿ ರಸ್ತೆಯುದ್ದಕ್ಕೂ ಅವಶೇಷಗಳು ಚೆಲ್ಲಾಪಿಲ್ಲಿಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯ ಭೀಕರತೆಯನ್ನು ವಿವರಿಸಿದ ಪ್ರತ್ಯಕ್ಷದರ್ಶಿ ಅಲಿ ಯೂಸುಫ್, “ಬೆಂಕಿ ಕಾಣಿಸಿಕೊಂಡ ತಕ್ಷಣ ಹಲವರು ವಾಹನಗಳ ಒಳಗೇ ಸಿಲುಕಿಕೊಂಡರು. ಅವರಿಗೆ ಹೊರಬರಲು ಸಮಯವೇ ಸಿಗಲಿಲ್ಲ; ಬೆಂಕಿಯ ಜ್ವಾಲೆ ವಾಹನಗಳ ಸಮೇತ ಒಳಗಿದ್ದವರನ್ನೂ ಆವರಿಸಿಕೊಂಡಿತು” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಈ ರಿಂಗ್ ರೋಡ್ ಗ್ರೇಟರ್ ಕೈರೋದ ಪ್ರಮುಖ ಹೆದ್ದಾರಿಗಳನ್ನು ಬೆಸೆಯುವ ಪ್ರಮುಖ ಸಾರಿಗೆ ಮಾರ್ಗವಾಗಿದ್ದು, ಕೈರೋ, ಗೀಜಾ ಮತ್ತು ಕಲ್ಯುಬಿಯಾ ಪ್ರಾಂತ್ಯಗಳನ್ನು ಸಂಪರ್ಕಿಸುತ್ತದೆ. ಅತಿವೇಗ, ಸಂಚಾರ ನಿಯಮಗಳ ಸಡಿಲ ಅನುಷ್ಠಾನ ಮತ್ತು ರಸ್ತೆಗಳ ದುಸ್ಥಿತಿಯಿಂದಾಗಿ ಈಜಿಪ್ಟ್‌ನಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ಸರ್ಕಾರಿ ಅಂಕಿಅಂಶಗಳ ಸಂಸ್ಥೆ (CAPMAS) ಪ್ರಕಾರ, 2024ರಲ್ಲಿ 5,260 ರಷ್ಟಿದ್ದ ರಸ್ತೆ ಅಪಘಾತದ ಸಾವುಗಳ ಸಂಖ್ಯೆ, 2025ರಲ್ಲಿ ಶೇ. 10.8 ರಷ್ಟು ಏರಿಕೆಯಾಗಿ 5,829 ಕ್ಕೆ ತಲುಪಿದೆ. ಜನಸಂಖ್ಯಾ ಬೆಳವಣಿಗೆ ಮತ್ತು ನಗರೀಕರಣಕ್ಕೆ ಅನುಗುಣವಾಗಿ ಹೆದ್ದಾರಿ ಹಾಗೂ ಸೇತುವೆಗಳನ್ನು ವಿಸ್ತರಿಸಲಾಗುತ್ತಿದ್ದರೂ, ರಸ್ತೆ ಸುರಕ್ಷತೆಯ ಆತಂಕ ಮಾತ್ರ ಮುಂದುವರಿದಿದೆ.










