ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ವಿಜಯನಗರೋತ್ತರ ಕಾಲದ ಇಂತಹ ಗುಹಾಂತರ ದೇವಾಲಯ ಜಿಲ್ಲೆಯಲ್ಲೇ ಎಲ್ಲೂ ಇಲ್ಲ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಯೋಗಾನಂದ ಎಸ್.ಕೆ. ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಸಮೀಪವಿರುವ ರಾಮದುರ್ಗದ ಹೊಸಗುಡ್ಡ ಗುಹಾಂತರ ದೇವಾಲಯದ ಬಳಿ ಹಮ್ಮಿಕೊಳ್ಳಲಾಗಿದ್ದ
ವಿಶ್ವ ಪರಂಪರೆ ಸಪ್ತಾಹ-2026 ಉದ್ಘಾಟಿಸಿ ಮಾತನಾಡಿದರು.
ಪವಾಡ ಪುರುಷ ಗುರು ತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಆಗಮಿಸಿದಾಗ ಗುಹಾಂತರ ದೇವಾಲಯ ಅವರಿಂದ ಸ್ಥಾಪನೆಯಾಯಿತೆಂದು ಸ್ಥಳೀಯ ಕಥೆಗಳು ಹೇಳುತ್ತವೆ. ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಗುಹಾಂತರ ದೇವಾಲಯದ ಸುತ್ತಲೂ ಕೋಟೆ ಕಟ್ಟಿರುವುದು ಈ ದೇವಾಲಯದ ವಿಶಿಷ್ಟ. ಇಲ್ಲಿ ಅಪರೂಪದ ವಾಸ್ತುಶಿಲ್ಪವಿದೆ ಎಂದು ತಿಳಿಸಿದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಜಿಲ್ಲೆಯಲ್ಲಿ ಅಪರೂಪದ ಸ್ಮಾರಕಗಳು ಮತ್ತು ಪ್ರಾಚ್ಯಾವಶೇಷಗಳಿವೆ. ಹೊಸಗುಡ್ಡದ ಗುಹಾಂತರ ದೇವಾಲಯಕ್ಕೆ ವಿಶಿಷ್ಟವಾದ ವಾಸ್ತುಶಿಲ್ಪವಿದೆ. ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಿ ಮಹತ್ವವನ್ನು ಅರಿಯಬೇಕು. ನಿಮ್ಮ ಮನೆಗಳಲ್ಲಿ ಹಳೆ ಕಾಲದ ನಾಣ್ಯಗಳು, ಖಡ್ಗಗಳು, ಇನ್ನಿತರೆ ಅಮೂಲ್ಯ ಪ್ರಾಚ್ಯ ವಸ್ತುಗಳಿದ್ದರೆ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.
ನಾಣ್ಯ ಸಂಗ್ರಹಕಾರ ಇರ್ಫಾನುಲ್ಲಾ ಮತ್ತು ಶಿವಶಂಕರ್ ಇವರುಗಳು ಕ್ರಿ.ಪೂ. ನಾಣ್ಯಗಳಿಂದ ಪ್ರಾರಂಭಿಸಿ ಬಹುಮನಿ, ಆದಿಲ್ಶಾಹಿ, ಟಿಪ್ಪುಸುಲ್ತಾನ್, ಮೈಸೂರು ಸಂಸ್ಥಾನದ ನಾಣ್ಯಗಳನ್ನು ಪ್ರದರ್ಶಿಸಿ ನಾಣ್ಯಗಳ ಪರಂಪರೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಜಿ.ಪ್ರಹ್ಲಾದ್, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹಲಸಂದಿ ಸತೀಶ್, ಕಾಲೇಜಿನ ಸಂಯೋಜಕರಾದ ಹೊನ್ನಮ್ಮ, ಪ್ರೇಮಲತಾ, ರೂಪ, ಪುರಾತತ್ವ ಇಲಾಖೆಯ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿಶ್ವ ಪರಂಪರೆ ಸಪ್ತಾಹದಲ್ಲಿ ಭಾಗವಹಿಸಿದ್ದರು.









