ಚಿತ್ರದುರ್ಗ.ನ.25: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ‘ಡಿವೈನ್ ಪಾರ್ಕ್’ನ ಅಂಗಸಂಸ್ಥೆಯಾದ ಚಿತ್ರದುರ್ಗ ವಿವೇಕ ಜಾಗ್ರತ ಬಳಗದ ವತಿಯಿಂದ, ನಗರದ ದವಳಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತ್ರಿಮೂರ್ತಿ ದೇಗುಲದ ಉದ್ಘಾಟನಾ ಸಮಾರಂಭ ಇದೇ ನ.27ರಂದು ಶುಕ್ರವಾರ ನಡೆಯಲಿದೆ.
ಅಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಶುಭ ಮುಹೂರ್ತದಲ್ಲಿ ನಡೆಯುವ ಈ ಮಂಗಳೋತ್ಸವದಲ್ಲಿ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ದೇಗುಲ ಉದ್ಘಾಟಿಸಲಿದ್ದಾರೆ.
ಚಿತ್ರದುರ್ಗದ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶಿವಲಿಂಗಾನಂದ ಮಹಾಸ್ವಾಮೀಜಿಗಳವರು ತ್ರಿಮೂರ್ತಿ ಮಂಟಪ ಅನಾವರಣಗೊಳಿಸಲಿದ್ದಾರೆ.
ಕಳೆದ 40 ವರ್ಷಗಳಿಂದ ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ಧಾರದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಾಲಿಗ್ರಾಮದ ಡಿವೈನ್ ಪಾರ್ಕ್‍ನ ಶ್ರೀ ಗುರೂಜೀ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ, ವಿಶೇಷ ಶ್ರದ್ಧಾಭಕ್ತಿಗಳಿಂದ ಈ ದೇಗುಲ ನಿರ್ಮಿಸಲಾಗಿದೆ.
ಉದ್ಘಾಟನಾ ಸಮಾರಂಭದ ಅಂಗವಾಗಿ ಸಂಜೆ 4 ರಿಂದ 6.30 ರವರೆಗೆ ಮೊಳಕಾಲ್ಮೂರಿನ ಶ್ರೀಕಲಾರಾಧನ ಭರತನಾಟ್ಯ ನೃತ್ಯ ಅಕಾಡೆಮಿಯ ಕಲಾವಿದರಿಂದ ಧವಳಗಿರಿ ಬಡಾವಣೆಯ ತ್ರಿಮೂರ್ತಿ ದೇಗುಲದ ಆವರಣದಲ್ಲಿ ಭಕ್ತಿಸಂಗೀತ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಈ ಸಮಾರಂಭಕ್ಕೆ ಸಮಸ್ತ ಸದ್ಭಕ್ತರು ಹಾಗೂ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಾಲಿಗ್ರಾಮದ ಶ್ರೇಯಸ್ ಟ್ರಸ್ಟ್‍ನ ಮೆನೇಜಿಂಗ್ ಟ್ರಸ್ಟಿ ವಿವೇಕ್, ದೇಗುಲ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಜಿ. ಎಮ್. ಸಿದ್ದಲಿಂಗಪ್ಪ (ಮೊ: 9980047212) ಹಾಗೂ ಟ್ರಸ್ಟಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.









