Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಗೊಲ್ಲಾಳಮ್ಮನ ಭಂಡಾರ ಉತ್ಸವದಲ್ಲಿ ಸೊಸೆಯಂದಿರ ಕುಣಿತ

---Advertisement---

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 06 : ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಗೊಲ್ಲಾಳಮ್ಮನ ಭಂಡಾರೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಉತ್ಸವದಲ್ಲಿ ಗ್ರಾಮದ ಸೊಸೆಯಂದಿರು ಪಾಲ್ಗೊಂಡು ಕುಣಿಯುವುದು ಪ್ರತಿ ವರ್ಷದ ವಾಡಿಕೆ.

ದಸರಾ ಹಬ್ಬದ ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷ ಪೂಜೆ, ದ್ವಾದಶಿ, ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಮಂಡಕ್ಕಿ ಸೇವೆ, ಸಿಡಿ ಮದ್ದಿನ ಉತ್ಸವ, ಮರುದಿನ ಭoಡಾರೋತ್ಸವ ನಡೆಯುತ್ತದೆ. ಜಾತ್ರೆಯ ಅಂತಿಮ ದಿನದಂದು ಸೊಸೆಯಂದಿರು ಸೀರೆಯುಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು, ದೇವಿಯ ಭoಡಾರವನ್ನ ಹಣೆಗೆ ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ಉರುವೆ ಹಾಗೂ ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸುತ್ತಾರೆ.

ಚಿತ್ತಮುತ್ತಿ ಕುಲದ ಕರಡಿ ಕುಳ್ಳಪ್ಪನ ವಂಶಸ್ಥರಾದ ಕರಡಿಗೊಲ್ಲರು ಈ ಶ್ರೀದೇವಿ ಗೊಲ್ಲಳ್ಳಮ್ಮ, ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ತಿಮ್ಮಪ್ಪ ಸ್ವಾಮಿಯನ್ನು ಆರಾಧಿಸುತ್ತಾರೆ. ಒಂದು ವಾರದವರೆಗೂ ದಸರಾ ಹಬ್ಬವನ್ನು ವಿಶೇಷವಾಗಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತದೆ. ಗ್ರಾಮದಲ್ಲಿ ಬಹುತೇಕ ಕರಡಿಗೊಲ್ಲರ ಕುಲ ಬೆಡಗಿನ ಮನೆಗಳಿವೆ. ಈ ಕುಟುಂಬಗಳಿಗೆ ಸೊಸೆಯಾಗಿ
ಬಂದವರು ಪ್ರತಿಯೊಬ್ಬರು ಈ ಭoಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಮೂಲಕ ಈ ಸಂಪ್ರದಾಯ ಆಚರಣೆ ಮಾಡಿಕೊಂಡು ಬರುತ್ತಿರುವುದು ತಾಲೂಕಿನಲ್ಲಿಯೇ ವಿಶಿಷ್ಟವಾಗಿದೆ.

ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮದೇವತೆ ಗೊಲ್ಲಾಳಮ್ಮ ಕುಣಿಯುತ್ತಾಳೆ. ಹೀಗಾಗಿ ಅಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದಲೂ ಸೊಸೆಯಂದಿರು ಈ ಉತ್ಸವದಲ್ಲಿ ಕುಣಿಯುವುದು ವಾಡಿಕೆಯಾಗಿ ಮುಂದುವರೆದುಕೊಂಡು ಬರಲಾಗಿದೆ. ಹಬ್ಬದ ಕೊನೆಯ ಭಂಡಾರೋತ್ಸವದ ದಿನದಂದು ಗ್ರಾಮದಲ್ಲಿ ಶಾಂತಿ, ಸಮೃದ್ಧಿಗಾಗಿ ದೇವರು ಮನೆ ಮನೆಗೆ ಭೇಟಿ ನೀಡುತ್ತದೆ. ಬಳಿಕ
ಸೊಸೆಯಂದಿರು ಗ್ರಾಮದ ಹನುಮಂತರಾಯ ದೇವಸ್ಥಾನದಿಂದ ಕುಣಿತ ಆರಂಭಿಸುತ್ತಾರೆ. ಈ ಉತ್ಸವದಲ್ಲಿ ಸೋಮನು ಸಹ ಸೊಸೆಯಂದಿರ ಜೊತೆಗೆ ಹೆಜ್ಜೆ ಹಾಕುವುದು ಮತ್ತೊಂದು ವಿಶೇಷತೆ. ಇದಾದ ಬಳಿಕ ಮಣೇವು ಕಾರ್ಯಕ್ರಮದೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ. ಹೊಳಲ್ಕೆರೆ, ಹೊಸದುರ್ಗ, ಚನ್ನಗಿರಿ, ಚಳ್ಳಕೆರೆ, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಾರೆ.

ನಮ್ಮೂರಿನ ದೇವಿಗೆ ಕುಣಿಯುವುದು ಎಂದರೆ ಅದು ಭಕ್ತಿಯ ಸಂಕೇತವಾಗಿದೆ. ಹಾಗಾಗಿ ನಾವು ದೇವಿಯನ್ನು ಸಂತೃಪ್ತಿಗೊಳಿಸಲು ಕುಣಿಯುತ್ತೇವೆ. ಮಕ್ಕಳ ಜೊತೆ ಕುಣಿಸಿಕೊಳ್ಳುವುದು ದೇವಿಗೆ ಇಷ್ಟವಿಲ್ಲ. ಹಾಗಾಗಿ ವಿಶೇಷವಾಗಿ ಸೊಸೆಯಂದಿರು ಕುಣಿದಾಗ ದೇವಿ ಸಂತೃಪ್ತಿಯಾಗುತ್ತಾಳೆ. ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಯಾವುದೇ ರೋಗ ರುಜಿನಗಳು ಬಾರದಿರಲಿ, ಊರು ಅಭಿವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರಕಲಿ ಎಂಬುದು ಕುಣಿತದ ಸಂಕೇತವಾಗಿದೆ ಎನ್ನುತ್ತಾರೆ ಗ್ರಾಮದ ಸೊಸೆಯಂದಿರು.

ಕುರಿ ಕರೆಯುವ ಉತ್ಸವ : ಭಂಡಾರೋತ್ಸವ ಹಿಂದಿನ ದಿನ ಸಂಜೆ ಶ್ರೀ ದೇವಿ ಗೊಲ್ಲಾಳಮ್ಮನ್ನು ಅಲಂಕರಿಸಿ ಪಲ್ಲಕ್ಕಿಯಲ್ಲಿ ಕೂರಿಸಿ ವಿವಿಧ ವಾಕ್ಯಗಳೊಂದಿಗೆ ಊರಿನ ಹೊರವಲಯದ ದಿನ್ನೆಗೆ ಕೊಂಡೊಯ್ದು ಸುಮಾರು ಎರಡ್ಮೂರು ಗಂಟೆಗಳ ಕಾಲ ದೇವರ ಸುತ್ತ ತಂಡ ತಂಡವಾಗಿ ಸಾವಿರಾರು ಕುರಿಗಳಿಂದ ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಕಾಡುಗೊಲ್ಲರಲ್ಲಿ ಕುರಿ ಸಾಕಾಣಿಕೆ ಹೆಚ್ಚಾಗಿದ್ದು, ದೇವರ ಪ್ರದಕ್ಷಿಣೆ ಹಾಕಿಸುವುದರಿಂದ ಕುರಿಗಳಿಗೆ ಕಾಲುರೋಗ, ಜ್ವರ, ದೊಮ್ಮೆಕಾಯಿಲೆ ಸೇರಿದಂತೆ ಯಾವುದೇ ರೋಗ ರುಜಿನೆಗಳು ಬರಬಾರದೆಂದು ಕುರಿಗಾಹಿಗಳ ನಂಬಿಕೆಯಾಗಿದೆ. ಈ ಆಚರಣೆಯು ಹಿಂದಿನಿಂದಲೂ ರೂಢಿಯಲ್ಲಿದೆ.

ನಾವು ತಲಾಂತರದಿಂದ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಬುಡಕಟ್ಟು ಕಾಡುಗೊಲ್ಲರಾದ ನಾವು ನಮ್ಮದೇ ಆದ ಶೈಲಿಯಲ್ಲಿ ಪ್ರತಿವರ್ಷ ಈ ಉತ್ಸವ ನಡೆಯುತ್ತದೆ. ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ, ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ಸೃಷ್ಟಿಸುತ್ತಾಳೆಂಬ ನಂಬಿಕೆಯಿದೆ. ನಮ್ಮೂರಿನ ಸೊಸೆಯಂದಿರು ದೇವಿಗೆ ಕುಣಿಯುವುದರ ಮೂಲಕ ಗೊಲ್ಲಳ್ಳೇಶ್ವರಿ ದೇವಿಯನ್ನು ಸಂತೃಪ್ತಿಗೊಳಿಸುತ್ತಾರೆ ಎನ್ನುತ್ತಾರೆ ಹಿರಿಯರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now