ಹಿರಿಯೂರು, ಆಗಸ್ಟ್. 25: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೆ ಅಭಿನಂದನ್ ಮಾತನಾಡಿ ಕಳೆದ ಒಂದೂವರೆ ತಿಂಗಳಲ್ಲಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಕಳಂಕ ಹಚ್ಚಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಲಾಗಿದೆ. ಸಮಾಜ ವಿರೋಧಿ, ದೇಶ ವಿರೋಧಿಗಳ ಜಾಲ ಪತ್ತೆಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ, ಹತ್ಯೆಗಳು ನಡೆದಿವೆ. ತುಷ್ಟೀಕರಣ ರಾಜಕೀಯದಿಂದ ಸಮಾಜಘಾತುಕ ಶಕ್ತಿಗಳ ಹೆಚ್ಚಾಗಿದೆ. ಸೌಹಾರ್ದ ನಾಡಿಗೆ ಕಪ್ಪು ಚುಕ್ಕೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸಣ್ಣಪುಟ್ಟ ಮೆಸೇಜ್ ಗಳಿಗೆ ಹಿಂದೂಗಳ ಮೇಲೆ ಕ್ರಮ ಕೈಗೊಳ್ಳುವ ನಾಚಿಕೆಗೇಡಿನ ಸರ್ಕಾರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದ ವ್ಯಕ್ತಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಹಿರಿಯ ಮುಖಂಡ ಎಂಎಸ್. ರಾಘವೇಂದ್ರ ಮಾತನಾಡಿ ಸೌಜನ್ಯ ಪ್ರಕರಣ ಹಿಟ್ಟುಕೊಂಡು ಶ್ರೀ ಮಂಜುನಾಥ ಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನ ಮಾಡಿ ಹುನ್ನಾರ ನಡೆಸುತ್ತಿದ್ದಾರೆ. ಇದೊಂದು ಷಡ್ಯಂತ್ರ ನಡೆಯುತ್ತಿದೆ. ದೇಶದ್ರೋಹಿಗಳಾದ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮ್ಮರೋಡಿ ಹಾಗೂ ಯುಟ್ಯೂಬರ್ ಸಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೌಜನ್ಯ ಕೊಲೆಗೆ ನ್ಯಾಯ ಒದಗಿಸಬೇಕು. ಯಾರೋ ಅನಾಮಿಕ ನೀಡಿದ ದೂರು ಆಧರಿಸಿ, ತನಿಖೆ ಕೈಗೊಂಡು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕೆಲಸ ಮಾಡಲಾಗಿದೆ. ಈ ತಪ್ಪಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಧರ್ಮಸ್ಥಳದ ನೆಲದಿಂದಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಎ. ರಾಘವೇಂದ್ರ, ಹರ್ಷ, ಜೆಬಿ. ರಾಜು, ಚಂದ್ರ ಕೀರ್ತಿ ಗುಜ್ಜಾರ್, ಯುವ ಮುಖಂಡರಾದ ನಿತಿನ್ ಗೌಡ, ಸ್ಟೂಡಿಯೋ ಗೋವಿಂದಪ್ಪ, ಯೋಗೇಶ್, ಕೆಟಿ. ಹನುಮಂತ್, ರಾಕೇಶ್, ಜೋಧಾ, ಪ್ರಜ್ವಲ್, ರತ್ನಮ್ಮ, ಸೇರಿದಂತೆ ಬಿಜೆಪಿಯ ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇದ್ದರು.


















