ಚಿತ್ರದುರ್ಗ.ಸೆ.04: ಹೊಳಲ್ಕೆರೆ ಪಟ್ಟಣದಲ್ಲಿ ಇದೇ ಸೆಪ್ಟೆಂಬರ್ 7 ರಂದು ವಿಶ್ವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ನೆರವೇರಲಿದ್ದು, ಹೀಗಾಗಿ ಹೊಳಲ್ಕೆರೆ ಪಟ್ಟಣದಲ್ಲಿ ಕೆಲ ಮಾರ್ಗದಲ್ಲಿ ಸಂಚಾರ ನಿಷೇಧ ಮತ್ತು ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ. ವೆಂಕಟೇಶ್ ಅವರು ಆದೇಶ ಹೊರಡಿಸಿದ್ದಾರೆ.
ಹೊಳಲ್ಕೆರೆ ಪಟ್ಟಣದ ವಿಶ್ವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸುಮಾರು 18 ರಿಂದ 20 ಸಾವಿರ ಭಕ್ತಾಧಿಗಳು ಭಾಗವಹಿಸುವುದರಿಂದ ರಾಷ್ಟ್ರೀಯ ಹೆದ್ದಾರಿ 369ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಸಾರ್ವಜನಿಕ ಸಂಚಾರ ಕ್ರಮಗೊಳಿಸುವ ದೃಷ್ಠಿಯಿಂದ ಸೆ.7ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರವರೆಗೆ ಹೊಳಲ್ಕೆರೆ ಪಟ್ಟಣದ ಮುಖ್ಯ ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸಂಚರಿಸಲಿರುವ ವಾಹನಗಳ ಸಂಚಾರ ನಿಷೇಧಿಸಿ, ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಲಾಗಿದೆ.
ಸಂಚಾರ ನಿಷೇಧ : ಹೊಸದುರ್ಗ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಕಡೆಗಳಿಂದ ಹೊಳಲ್ಕೆರೆ ಪಟ್ಟಣದೊಳಗೆ ಪ್ರವೇಶಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಿದೆ.
ಮಾರ್ಗ ಬದಲಾವಣೆ: ಚಿತ್ರದುರ್ಗದಿಂದ ಬರುವ ವಾಹನಗಳು ಚಿತ್ರಹಳ್ಳಿ ಗೇಟ್‍ನಿಂದ ಹೆಚ್.ಡಿ.ಪುರ ಮಾರ್ಗವಾಗಿ ಹೋಗುವುದು ಹಾಗೂ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ಚಿಕ್ಕಜಾಜೂರು ಹೊಳಲ್ಕೆರೆ ರೈಲ್ವೆ ನಿಲ್ದಾಣದ ಮಾರ್ಗವಾಗಿ ಹೋಗುವುದು. ಹೊಸದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ಆವಿನಹಟ್ಟಿ, ಆರೇಹಳ್ಳಿ ರೈಲ್ವೆ ನಿಲ್ದಾಣದ ಮುಖಾಂತರ ಹೋಗುವುದು, ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಅರೇಹಳ್ಳಿ ರೈಲ್ವೇ ನಿಲ್ದಾಣದ ಮುಖಾಂತರ ಪೂಣಜೂರು, ಮಲ್ಕಾಪುರ, ಚಿಕ್ಕಜಾಜೂರು, ಬಿ.ದುರ್ಗ, ಭೀಮಸಮುದ್ರ ಮಾರ್ಗವಾಗಿ ಹೋಗುವುದು ಹಾಗೂ ಶಿವಮೊಗ್ಗದಿಂದ ಹೊಸದುರ್ಗಕ್ಕೆ ಹೋಗುವ ವಾಹನಗಳು ಅರೇಹಳ್ಳಿ ರೈಲ್ವೇ ನಿಲ್ದಾಣದ ಮುಖಾಂತರ ಮಾಳೇನಹಳ್ಳಿ, ಅವಳಿಹಟ್ಟಿ, ಹೊಳಲ್ಕೆರೆ ಮಾರ್ಗವಾಗಿ ಹೋಗುವುದು. ದಾವಣಗೆರೆಯಿಂದ ಬರುವ ವಾಹನಗಳು ಮಲ್ಕಾಪುರ, ಅರೇಹಳ್ಳಿ ರೈಲ್ವೆ ನಿಲ್ದಾಣದ ಮುಖಾಂತರ ಹೊಳಲ್ಕೆರೆಗೆ ಹೋಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶದಲ್ಲಿ ತಿಳಿಸಿದ್ದಾರೆ.
















