ಬೆಂಗಳೂರು.ಆಗಸ್ಟ್.9 : ರಾಜ್ಯದಲ್ಲಿ ಕೊಂಚ ವಿರಾಮ ನೀಡಿದ್ದ ಮುಂಗಾರು ಮಳೆ ಮತ್ತೆ ಆರ್ಭಟಿಸಲು ಶುರುಮಾಡಿದ್ದು, ಹವಾಮಾನ ಇಲಾಖೆ (IMD) ಮುಂದಿನ 24 ಗಂಟೆಗಳ ಕಾಲ ಕರಾವಳಿ ಸೇರಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿರಲಿದೆ. ಇತ್ತ ಉತ್ತರ ಒಳನಾಡಿನಲ್ಲೂ ಆಗಸ್ಟ್ 9ರಂದು ಹವಾಮಾನ ವೈಪರೀತ್ಯ ಮುಂದುವರಿಯಲಿದ್ದು, ಸಿಡಿಲು ಹಾಗೂ ಬಲವಾದ ಮೇಲ್ಮೈ ಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಹಾವೇರಿ ಹಾಗೂ ಬಳ್ಳಾರಿ ಭಾಗಗಳಲ್ಲಿ ವಾತಾವರಣ ಕೊಂಚ ಭಿನ್ನವಾಗಿರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದು. ಈ ಜಿಲ್ಲೆಗಳಲ್ಲಿ ಆಗಸ್ಟ್ 14ರವರೆಗೆ ಮೋಡ ಕವಿದ ಹಾಗೂ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.










