ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್ : ಜಪಾನ್ ದೇಶದಲ್ಲಿ ಪದೇ ಪದೇ ಭೂಕಂಪನಗಳು ಸಂಭವಿಸಲು ಅಲ್ಲಿನ ಟೆಕ್ಟೋನಿಕ್ ಪ್ಲೇಟ್ಗಳ ಚಲನೆ ಮತ್ತು “ರಿಂಗ್ ಆಫ್ ಫೈರ್” ವಲಯದಲ್ಲಿ ಇರುವ ಅದರ ಭೌಗೋಳಿಕ ಸ್ಥಳವೇ ಮುಖ್ಯ ಕಾರಣವಾಗಿದೆ.
ಪೆಸಿಫಿಕ್ ಮಹಾಸಾಗರದ ಅತಿದೊಡ್ಡ ಜ್ವಾಲಾಮುಖಿ ಹಾಗೂ ಭೂಕಂಪನ ಪೀಡಿತ ಈ ಪ್ರದೇಶವು ಪೆಸಿಫಿಕ್, ಫಿಲಿಪೈನ್ಸ್, ಯುರೇಷಿಯನ್ ಮತ್ತು ಉತ್ತರ ಅಮೆರಿಕನ್ ಎಂಬ ನಾಲ್ಕು ದೊಡ್ಡ ಭೂಫಲಕಗಳ ಸಂಗಮದ ಮೇಲಿದೆ. ಈ ಫಲಕಗಳು ನಿರಂತರವಾಗಿ ಒಂದರ ಮೇಲೊಂದು ತಳ್ಳಿಕೊಳ್ಳುವುದರಿಂದ ಮತ್ತು ಅವುಗಳ ನಡುವಿನ ಘರ್ಷಣೆಯಿಂದ ಭೂಮಿಯ ಒಳಗೆ ಅಗಾಧವಾದ ಒತ್ತಡ ಹಾಗೂ ಶಕ್ತಿ ಸೃಷ್ಟಿಯಾಗಿ ತೀವ್ರ ಭೂಕಂಪನಗಳು ಸಂಭವಿಸುತ್ತವೆ.

ಈ ಭೂಕಂಪನಗಳನ್ನು ತಡೆಯಲು ಮತ್ತು ಹಾನಿಯನ್ನು ಕಡಿಮೆ ಮಾಡಲು ಜಪಾನ್ ಅತ್ಯಾಧುನಿಕ ಎಂಜಿನಿಯರಿಂಗ್ ವಿನ್ಯಾಸಗಳು, ಸಿಸ್ಮಿಕ್ ಐಸೋಲೇಶನ್ ಹಾಗೂ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತದೆ. ಕಟ್ಟಡ ನಿರ್ಮಾಣದಲ್ಲಿ ‘ಟೈಶಿನ್’ ತಂತ್ರಜ್ಞಾನವನ್ನು ಬಳಸಿ, ಗಟ್ಟಿಯಾದ ರಚನೆ, ಗೋಡೆಗಳು ಮತ್ತು ಕಂಬಗಳನ್ನು ದಪ್ಪವಾದ ಉಕ್ಕು ಹಾಗೂ ಕಾಂಕ್ರೀಟ್ನಿಂದ ನಿರ್ಮಿಸಿ ಭೂಕಂಪನದ ಆಘಾತವನ್ನು ನೇರವಾಗಿ ಎದುರಿಸುವಂತೆ ಮಾಡಲಾಗುತ್ತದೆ.
ಇನ್ನು ‘ಮೆನ್ಶಿನ್’ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಟ್ಟಡದ ತಳಪಾಯದ ಅಡಿಯಲ್ಲಿ ವಿಶೇಷ ರಬ್ಬರ್ ಪ್ಯಾಡ್ಗಳು, ಸ್ಪೆರಿಕಲ್ ಬೇರಿಂಗ್ಗಳು ಅಥವಾ ಶಾಕ್ ಅಬ್ಸಾರ್ಬರ್ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಭೂಮಿ ನಡುಗಿದಾಗ ಕಟ್ಟಡದ ತಳಭಾಗ ಮಾತ್ರ ಚಲಿಸಿ, ಮೇಲಿನ ಕಟ್ಟಡವು ಸುರಕ್ಷಿತವಾಗಿ ಉಳಿಯುತ್ತದೆ. ಇದರ ಜೊತೆಗೆ ಕಂಪನ ನಿಯಂತ್ರಣ ತಂತ್ರಜ್ಞಾನ ಬಳಸಿ ಕಟ್ಟಡದ ಒಳಗೆ ತೈಲ ಅಥವಾ ಉಕ್ಕಿನ ಡ್ಯಾಂಪರ್ಗಳನ್ನು ಇಟ್ಟು, ಭೂಕಂಪದ ಅಲೆಗಳು ನೀಡುವ ಶಕ್ತಿಯನ್ನು ಹೀರಿಕೊಂಡು ಕಟ್ಟಡವು ಹೆಚ್ಚಾಗಿ ಅಲುಗಾಡದಂತೆ ನಿಯಂತ್ರಿಸಲಾಗುತ್ತದೆ.
ಜಪಾನ್ ಸರ್ಕಾರದ ಕಟ್ಟಡ ನಿರ್ಮಾಣ ಕಾಯ್ದೆಗಳ ಪ್ರಕಾರ ಯಾವುದೇ ಹೊಸ ಕಟ್ಟಡವನ್ನು ನಿರ್ಮಿಸುವಾಗ ಅದು ಭಾರಿ ತೀವ್ರತೆಯ ಭೂಕಂಪನಕ್ಕೂ ಕುಸಿದು ಬೀಳದಂತೆ ನಿರ್ಮಿಸುವುದು ಕಡ್ಡಾಯವಾಗಿದೆ. ಜಪಾನ್ನಲ್ಲಿ ಭೂಕಂಪನ ಆರಂಭವಾಗುವ ಮುನ್ನವೇ ಸಾರ್ವಜನಿಕರ ಮೊಬೈಲ್ ಹಾಗೂ ಟಿವಿಗಳಿಗೆ ಎಮರ್ಜೆನ್ಸಿ ಮುನ್ಸೂಚನೆ ಕಳುಹಿಸುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯಿದೆ. ಶಾಲಾ ಹಂತದಿಂದಲೇ ಮಕ್ಕಳಿಗೆ ಭೂಕಂಪನದ ಸಮಯದಲ್ಲಿ ಹೇಗೆ ತಲೆ ಮರೆಸಿಕೊಂಡು ಸುರಕ್ಷಿತವಾಗಿರಬೇಕು ಎಂದು ನಿರಂತರವಾಗಿ ಜಾಗೃತಿ ಹಾಗೂ ತರಬೇತಿ ನೀಡಲಾಗುತ್ತದೆ. ಬೆಂಕಿ ಅವಘಡಗಳನ್ನು ತಡೆಯಲು ಅನಿಲ ಪೂರೈಕೆಯನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸಲಾಗಿದ್ದು, ಭೂಕಂಪನದಿಂದ ಉಂಟಾಗುವ ಸುನಾಮಿ ತಡೆಯಲು ಭಾರಿ ಎತ್ತರದ ನೀರಿನ ಗೇಟ್ಗಳನ್ನು ನಿರ್ಮಿಸಲಾಗಿದೆ.
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821











