ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಹಲ್ಲು ದೇಹದ ಒಂದು ಪ್ರಮುಖವಾದ ಅಂಗವಾಗಿದ್ದು ಈ ಹಲ್ಲನ್ನು ಕಾಲರ್ ರೀತಿಯಲ್ಲಿ ಬಲವಾಗಿ ಮೂಳೆಗೆ ಜೋಡಿಸಿರುವುದೇ ವಸಡು. ಈ ವಸಡು ಸಾಮಾನ್ಯವಾಗಿ ತಿಳಿಗುಲಾಬಿ ಬಣ್ಣದಿಂದ ಕೂಡಿದ್ದು, ಬಲಶಾಲಿಯಾಗಿದ್ದಷ್ಟು ಹಲ್ಲು ದೃಢತೆಯಿಂದ ಕೂಡಿರುತ್ತದೆ, ಜೊತೆಗೆ ಹಲ್ಲಿನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ.
ಹತ್ತಾರು ವಿವಿಧ ಕಾರಣಗಳಿಂದ ಕೆಲವೊಮ್ಮೆ ವಸಡು ರೋಗಪೀಡಿತವಾದಾಗ ಸಹಜವಾಗಿ ಅದರ ಜೊತೆಗೆ ಇರುವ ಹಲ್ಲು ಕೂಡ ಸಮಸ್ಯೆಗೆ ಈಡಾಗುತ್ತದೆ.
ವಸಡಿನ ಆರೋಗ್ಯವೇ ದಂತಾರೋಗ್ಯಕ್ಕೆ ಪೂರಕ ಎಂಬುದನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು.
ಇಡೀ ದಂತ ಪಂಕ್ತಿಗೆ ಆಧಾರ, ಅಡಿಪಾಯ, ಸಂರಕ್ಷಣೆಯೇ ವಸಡಿನ ಪ್ರಮುಖ ಕಾರ್ಯವಾಗಿರುತ್ತದೆ. ವಸಡಿನ ಅನಾರೋಗ್ಯವನ್ನು ಅದರ ಬದಲಾದ ಬಣ್ಣದಿಂದ ಪ್ರತಿಯೊಬ್ಬರು ಗಮನಿಸಿಕೊಳ್ಳಬಹುದು. ಒಮ್ಮೆ ಬದಲಾದ ಬಣ್ಣವು ಆರೋಗ್ಯಕರ ಸ್ಥಿತಿಗೆ ಮರಳಿದಾಗ ಪುನಃ ತನ್ನ ಮೂಲ ಹವಳತಿಳಿಗೆಂಪು ಬಣ್ಣಕ್ಕೆ ತಿರುಗುತ್ತದೆ.
ವಸಡು ಕೆಲವೊಮ್ಮೆ ಉಬ್ಬಿಕೊಂಡು ಹಲ್ಲಿನ ತನ್ನ ಮೂಲ ಸ್ಥಾನದಿಂದ ಕೆಳಗೆ ಜಾರಿದರೆ ಕೆಲವೊಮ್ಮೆ ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳು ಇಲ್ಲದೆ ವಸಡು ಅಲ್ಲಿಂದ ಕೆಳಗೆ ಸರಿಯಬಹುದು. ಬಹಳಷ್ಟು ಜನರು ದಂತ ವೈದ್ಯರಲ್ಲಿ ಭೇಟಿ ಕೊಟ್ಟಾಗ ತಮ್ಮ ಹಲ್ಲು ಉದ್ದವಾಗಿದೆ ಎಂದೇ ಹೇಳುತ್ತಾರೆ. ಆದರೆ ನಿಜವಾಗಿ ಇಲ್ಲಿ ಹಲ್ಲು ಉದ್ದವಾಗಿರುವುದಿಲ್ಲ. ಬದಲಾಗಿ ಅದರ ಮೇಲ್ಭಾಗದ ವಸಡು ಸವೆದು ಹಲ್ಲು ಉದ್ದವಾದಂತೆ ಭಾಸವಾಗುತ್ತದೆ. ವಸಡು ಸವೆದರೆ ಹಲ್ಲಿನ ಆರೋಗ್ಯ ಮತ್ತು ಅದರ ದೃಢತೆಗೆ ಸಮಸ್ಯೆಯಾಗಿದೆ ಎಂದೇ ಅರ್ಥ.ವಸಡು ಸವೆಯುವುದು ಒಂದು ಶಾಶ್ವತವಾದ ಸಮಸ್ಯೆ.
ವಸಡು ಒಮ್ಮೆ ಸವೆದರೆ ಮತ್ತೆಂದಿಗೂ ಪುನಃ ಮೂಲಸ್ಥಾನಕ್ಕೆ ಬರುವುದಿಲ್ಲ. ಕಾರಣ ಹಲ್ಲನ್ನು ಹಿಡಿದಿರುವ ಮೂಳೆಯ ಸಮೇತ ವಸಡು ಸವೆದು ಹೋಗುವ ಕಾರಣ ಈ ಮೂಳೆ ಪುನಃ ಶಾಶ್ವತವಾಗಿ ಮರು ಬೆಳವಣಿಗೆ ಆಗುವುದಿಲ್ಲ.

ವಸಡು ಸವೆತದಿಂದ ಆಗುವ ಸಮಸ್ಯೆಗಳು :
*ಹಲ್ಲಿನ ಮೇಲ್ಪದರದ ಮೂಳೆ ಸವೆದು ಹಲ್ಲಿನ ಅಂದ ಹಾಗೂ ಮುಖಚರ್ಯೆ ಬದಲಾಗುತ್ತದೆ.
* ಸವೆದ ವಸಡಿನಿಂದ ಹಲ್ಲಿನ ಭಾಗವು ಬಾಹ್ಯ ವಾತಾವರಣಕ್ಕೆ ತೆರೆದುಕೊಂಡು ನೀರು,ಗಾಳಿ, ತಂಪಾದ,ಬಿಸಿ… ಆಹಾರಗಳಿಗೆ ಸಂವೇದನಶೀಲವಾಗಿ ಹಲ್ಲುಗಳು ಜುಮ್ ಎನ್ನಲು ಶುರುವಾಗುತ್ತವೆ.
* ಹುಳುಕು ಆಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ.
* ಹಲ್ಲಿನ ಸ್ವಚ್ಛತೆ ಪ್ರತಿದಿನದ ಸಮಸ್ಯೆಯಾಗುತ್ತದೆ.
* ಹಲ್ಲಿನ ಮೂಳೆ ಭಾಗವು ದೃಢತೆ ಕಳೆದುಕೊಂಡು ಹಲ್ಲಿನ ಆಧಾರ ನಿಧಾನವಾಗಿ ಸಡಿಲಗೊಳ್ಳುತ್ತದೆ.
* ಹಲ್ಲಿನ ವಸಡು ಭಾಗವು ರೋಗಪೀಡಿತವಾಗಿ ವಸಡಿನ ಸಮಸ್ಯೆಗಳಾದ ವಸಡಿನೂತ,ವಸಡಿನಲ್ಲಿ ಬಾವು,ವಸಡಿನಲ್ಲಿ ರಕ್ತಸ್ರಾವ… ಮುಂತಾದ ಸಮಸ್ಯೆ ದಿನೇ ದಿನೇ ಹೆಚ್ಚಾಗಬಹುದು.
* ಹಲ್ಲುಗಳಲ್ಲಿ ಆಹಾರ ಕಣಗಳು ಅಲ್ಲಲ್ಲಿ ಸಿಕ್ಕಿಬಿದ್ದು ಹಲ್ಲಿನ ಸ್ವಚ್ಛತೆ ಸರಿಯಾಗದಿರುವುದು, ಬ್ರಷ್ ಮಾಡಲು ಸಮಸ್ಯೆಯಾಗುವುದು.
ವಸಡಿನ ಸವೆತಕ್ಕೆ ಕಾರಣಗಳು :
* ವಸಡಿನ ತೀವ್ರ ಸೋಂಕು.
* ಸರಿಯಾದ ರೀತಿಯಲ್ಲಿ ಬ್ರಷ್ ಮಾಡದಿರುವುದು,ತಪ್ಪಾದ ವಿಧಾನದಲ್ಲಿ ಬ್ರಷ್ ಮಾಡುವುದರಿಂದ,ಗಟ್ಟಿ ಬ್ರಷ್ ಬಳಸುವುದರಿಂದ, ಒತ್ತಾಗಿ, ಗಟ್ಟಿಯಾಗಿ ಬ್ರಷ್ ಮಾಡುವುದರಿಂದ …
* ಹಲ್ಲನ್ನು ಸ್ವಚ್ಛಗೊಳಿಸಲು ಇದ್ದಿಲು,ಇಟ್ಟಿಗೆ ಪುಡಿ,ಗಾರೆ ಪುಡಿ,ರಂಗೋಲಿ ಹಿಟ್ಟು.. ಬಳಸುವುದರಿಂದ.
* ಮೂಳೆಯಿಂದ ಹಲ್ಲುಗಳು ಹೊರ ಚಾಚಿಕೊಂಡಿರುವುದು.
* ಒಂದೇ ಸಮನಾಗಿ ಹಲ್ಲು ಸರಳ ರೇಖೆಯಲ್ಲಿ ಇರದೇ, ವಕ್ರತೆಯಿಂದ ಹಿಂದು -ಮುಂದು ಬೆಳವಣಿಗೆ ಆಗಿರುವುದು, ವಕ್ರತೆಯಿಂದ ದಂತದಟ್ಟಣೆ ಆಗಿರುವುದು.
* ವಸಡಿನ ಸಮಸ್ಯೆಗಳು.
* ಬಾಯಿಯ ಆರೋಗ್ಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು.
* ವಸಡಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು.
* ಹಲ್ಲುಗಳ ಸಂಧಿಯಲ್ಲಿ ಕಡ್ಡಿಪಿನ್ನು ಹಾಕುವುದರಿಂದ ಕೂಡ ಈ ಸಮಸ್ಯೆ ಹೆಚ್ಚಾಗುವುದು.
ಪರಿಹಾರವೇನು?
* ವಸಡಿನ ಸಮಸ್ಯೆಗೆ ಕಾರಣವನ್ನು ತಿಳಿದು ಪರಿಹಾರ ಮಾಡುವುದು.
* ವಸಡಿನ ಸಮಸ್ಯೆಯನ್ನು ದೀರ್ಘಕಾಲಿನವಾಗಿ ಬಿಡಬಾರದು. ಸಮಸ್ಯೆ ಕಂಡ ತಕ್ಷಣ ಅದನ್ನು ದಂತ ವೈದ್ಯರಲ್ಲಿ ತೋರಿಸಿಕೊಂಡು ಮತ್ತೆ ಹೆಚ್ಚು ಆಗದಂತೆ ಗಮನಿಸುವುದು.
* ವಕ್ರದಂತ ಸಮಸ್ಯೆಯನ್ನು ಬಾಲ್ಯಾವಸ್ಥೆಯಲ್ಲಿಯೇ ಸರಿಪಡಿಸುವುದು.
* ಗಟ್ಟಿ ಬ್ರಷ್ ಬಳಸುವುದರ ಬದಲಿಗೆ ಮೃದು ಬ್ರಷ್ ಬಳಸುವುದು.
* ಸರಿಯಾದ ರೀತಿಯಲ್ಲಿ ಹಲ್ಲಿನ ಬ್ರಷ್ ಮಾಡುವುದನ್ನು ದಂತ ವೈದ್ಯರಿಂದ ತಿಳಿದುಕೊಂಡು ಅದನ್ನು ಪಾಲಿಸುವುದು.
* ಯಾವುದೇ ಕಾರಣಕ್ಕೂ ಹಲ್ಲುಗಳ ಸಂಧಿಯಲ್ಲಿ ಕಡ್ಡಿಪಿನ್ನು ಹಾಕಬಾರದು.
* ಬಾಯಿಯ ದಂತ ಆರೋಗ್ಯ ಕಾಪಾಡಿಕೊಳ್ಳುವುದು.
* ಹಲ್ಲಿನ ವಸಡು ಸಂಪೂರ್ಣ ತೀವ್ರ ರೀತಿಯಲ್ಲಿ ಹಾನಿಯಾದಾಗ ಅಲೋಗ್ರಾಫ್ಟ್ (allograft ) ಚಿಕಿತ್ಸೆ ಪರಿಣಾಮಕಾರಿ ಆಗಿರುತ್ತದೆ, ಈ ಚಿಕಿತ್ಸೆಯಲ್ಲಿ ನಮ್ಮದೇ ಅಂಗುಳದ ಮೇಲ್ಪದರದ ಚರ್ಮವನ್ನು ತೆಗೆದು ಸವೆದ ವಸಡಿನ ಭಾಗಕ್ಕೆ ಕಸಿ ಮಾಡಲಾಗುತ್ತದೆ.
* ಈ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಹಾಗೂ ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ. ಪ್ರಾಥಮಿಕ ಹಂತದಲ್ಲಿ ಮಾತ್ರ ಇದು ಪರಿಣಾಮಕಾರಿಯಾಗಿರುತ್ತದೆ.
* ಬಾಯಿ ಮತ್ತು ಹಲ್ಲಿನ ಸ್ವಚ್ಛತೆ ವಸಡಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಒಂದು ಸರಳವಾದ ವಿಧಾನವಾಗಿದೆ.
ಏನಿದು ಅಲೋಗ್ರಾಫ್ಟ್ ಚಿಕಿತ್ಸೆ?
ಅಲೋ ಎಂದರೆ ನಮ್ಮ ದೇಹದ ಒಂದು ಭಾಗ, ಮತ್ತು ಗ್ರಾಫ್ಟ್ ಎಂದರೆ ಕಸಿ ಮಾಡುವುದು.
ಅಂದರೆ ನಮ್ಮದೇ ದೇಹದ ಒಂದು ಭಾಗದಿಂದ ಚರ್ಮವನ್ನು ತೆಗೆದು ಹನಿಯಾದ ನಶಿಸಿದ ದೇಹದ ಮತ್ತೊಂದು ಭಾಗಕ್ಕೆ ಮರು ಜೋಡಣೆ ಮಾಡಿ ಸರಿಪಡಿಸುವುದು.
ಈ ವಿಧಾನದ ಚಿಕಿತ್ಸೆಯಲ್ಲಿ ಸವೆದ ವಸಡಿನ ಭಾಗದಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮೂಲಕ ಆ ಖಾಲಿ ಜಾಗದಲ್ಲಿ ಮತ್ತೊಮ್ಮೆ ವಸಡು ಭಾಗವನ್ನು ಬೆಳೆಯುವಂತೆ ಪ್ರಚೋದಿಸುವ ಪ್ರಕ್ರಿಯೆ ಇದಾಗಿರುತ್ತದೆ. ರೋಗಿಯ ಬಾಯಿಯ ಅಂಗಳದ ಮೇಲ್ಪದರವನ್ನು ತೆಗೆದು ಹಾನಿಯಾದ ಭಾಗದಲ್ಲಿ ಕಸಿ ಮಾಡುವುದು. ಅಂಗಳದ ತೆಗೆದ ಭಾಗದಲ್ಲಿ ಚರ್ಮವು ತನ್ನಿಂತಾನೆ ಮತ್ತೊಮ್ಮೆ ಬೆಳೆಯುತ್ತದೆ. ತೆಗೆದ ಚರ್ಮ ಭಾಗವನ್ನು ಕೊರತೆ ಬಿದ್ದ ವಸಡಿನ ಭಾಗಕ್ಕೆ ಕೂಡಿಸಿ ಅದು ಪುನಃ ಜಾರದಂತೆ ಹೊಲಿಗೆ ಹಾಕಲಾಗುತ್ತದೆ. ವಾರದ ನಂತರ ಹೊಲಿಗೆ ತೆಗೆಯಲಾಗುತ್ತದೆ. ಹಸಿ ಮಾಡಿದ ಚರ್ಮವು ಕೊರತೆ ಬಿದ್ದ ಜಾಗಕ್ಕೆ ಹೊಂದಿಕೊಂಡು ಮೂಳೆ ಪುನಃ ಬೆಳೆದು ಸ್ವಸ್ಥಾನಕ್ಕೆ ಹೊಸ ವಸಡು ಸಂಪೂರ್ಣವಾಗಿ ಬೆಳೆದು ಮುಚ್ಚಲು ಕನಿಷ್ಠ 12ರಿಂದ 16 ವಾರ ಬೇಕಾಗುವುದು. ಇದೊಂದು ಸರಳ ಹಾಗೂ ಶಾಶ್ವತ ಚಿಕಿತ್ಸಾ ವಿಧಾನವಾಗಿದೆ.














