ಚಿತ್ರದುರ್ಗ. ಆ.29: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಗೃಹಲಕ್ಷ್ಮೀ” ಯೋಜನೆಗೆ ಮೂರು ವರ್ಷ ತುಂಬಿದ ನೆನಪಿಗಾಗಿ ಇದೇ ಆಗಸ್ಟ್ 30ರಂದು ಐತಿಹಾಸಿಕ ಚಿತ್ರದುರ್ಗ ಕಲ್ಲಿನ ಕೋಟೆಯ ರಂಗಯ್ಯನ ಬಾಗಿಲು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಗುಲಾಬಿ ಬಣ್ಣದ (ಪಿಂಕ್ ಲೈಟ್) ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆಯು ಆಗಸ್ಟ್ 30ಕ್ಕೆ ಯಶಸ್ವಿಯಾಗಿ ಮೂರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಆ.30ರಂದು ಭಾನುವಾರ ಸಂಜೆ 6 ರಿಂದ ರಾತ್ರಿ 10 ರವರೆಗೆ ಗುಲಾಬಿ ಬಣ್ಣ (ಪಿಂಕ್ ಲೈಟ್)ದ ಬೆಳಕಿನಲ್ಲಿ ಕಂಗೊಳಿಸಲಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿದ್ಯುತ್ ದೀಪಾಲಂಕಾರ ಆಯೋಜಿಸುತ್ತಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2,000/- ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಗೃಹಲಕ್ಷ್ಮೀ ಯೋಜನೆ ನೆರವಾಗಿದೆ. ಇದುವರೆಗೂ ಈ ಯೋಜನೆ ಅಡಿ 1.20ಕೋಟಿ ಫಲಾನುಭವಿಗಳ ಖಾತೆಗೆ 76500 ಕೋಟಿಗೂ ಹೆಚ್ಚು ಹಣ ಪಾವತಿಸಲಾಗಿದೆ.
ಗೃಹಲಕ್ಷ್ಮೀ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಬೆಳಕಿನ ಅಲಂಕಾರವನ್ನು ಸಾರ್ವಜನಿಕರು ಆಗಸ್ಟ್ 30ರಂದು ಸಂಜೆ 6 ರಿಂದ ರಾತ್ರಿ 10 ರವರೆಗೆ ವೀಕ್ಷಿಸಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮನವಿ ಮಾಡಿದ್ದಾರೆ.














