ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 : ವಿವೇಚನೆ, ವೈಜ್ಞಾನಿಕ ಚಿಂತನೆ, ಪ್ರಶ್ನೆ ಮಾಡುವ ಗುಣವನ್ನು ಎಲ್ಲಿಯವರೆಗೂ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯತನಕ ಮೂಢನಂಬಿಕೆಯಿಂದ ಹೊರ ಬರಲು ಸಾಧ್ಯವಿಲ್ಲ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಜಿ.ಎನ್.ಮಲ್ಲಿಕಾರ್ಜುನಪ್ಪ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಚಿತ್ರದುರ್ಗ ಸೈನ್ಸ ಫೌಂಡೇಶನ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಕೇಂದ್ರಿತ ಮೌಢ್ಯ ಮತ್ತು ವೈಚಾರಿಕ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಢ ನಂಬಿಕೆ, ಶೋಷಣೆಗೆ ಮಹಿಳೆಯರೆ ಹೆಚ್ಚು ಬಲಿಯಾಗುತ್ತಿರುವುದರಿಂದ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಮೌಢ್ಯವನ್ನು ನಂಬಬಾರದೆಂದರೆ ಮೊದಲು ಶಿಕ್ಷಣವಂತರಾಗಿ. ವೈಜ್ಞಾನಿಕ ಮನೋಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಜವಾಬ್ದಾರಿ ಅಧ್ಯಾಪಕರುಗಳ ಮೇಲಿದೆ. ಮೂಢ ನಂಬಿಕೆ ಭ್ರಷ್ಟಾಚಾರದಿಂದ ಭಾರತ ಎಂದಿಗೂ ವಿಶ್ವ ಗುರುವಾಗಲಾರದು. ಪಠ್ಯಪುಸ್ತಕವನ್ನು ನೆಪವಾಗಿಟ್ಟುಕೊಂಡು ಮಕ್ಕಳಿಗೆ ಜಗತ್‍ದರ್ಶನ ಮಾಡಿಸುವವರೆ ಒಳ್ಳೆಯ ಶಿಕ್ಷಕರು ಎಂದು ಚಂಪ ಹೇಳಿದ್ದಾರೆ. ಮಹಿಳೆಯರು ಮಾನಸಿಕ, ದೈಹಿಕ ಸಬಲೀಕರಣವಾದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಬಹುದೆಂದರು.
ಸನಾತನ ಕಾಲದಿಂದ ಇಲ್ಲಿಯವರೆಗೂ ಮಹಿಳೆಯರನ್ನು ಮೌಢ್ಯತೆಗೆ ನೂಕಲಾಗುತ್ತಿದೆ. ಆರ್ಯರ ಆಗಮನದಲ್ಲಿ ಅಸಮಾನತೆ ಆರಂಭವಾಯಿತು. ಮಹಿಳೆಯರಿಗೆ ಕೆಲಸವನ್ನು ಹಂಚುವಲ್ಲಿಯೂ ತಾರತಮ್ಯವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ವಸ್ತುವನ್ನಾಗಿ ಬಳಸಿಕೊಂಡು ಮೌಢ್ಯವನ್ನು ಬಿತ್ತಲು ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸ್ವಂತ ಆಲೋಚನೆಗಳನ್ನು ಕಮರಿಸುವ ಶಕ್ತಿಗಳ ವಿರುದ್ದ ಮಹಿಳೆಯರು ಮೊದಲು ಎಚ್ಚೆತ್ತುಕೊಳ್ಳಬೇಕು. ಜ್ಯೋತಿಷ್ಯವನ್ನು ನಂಬಲು ಮೂಲ ಕಾರಣ ಯಾವುದೆಂದರೆ ಭಯ. ವಿಜ್ಞಾನ ಸತ್ಯವನ್ನು ಹೇಳುತ್ತೆ. ಮೌಡ್ಯ ಸತ್ಯವನ್ನು ನಿಯಂತ್ರಿಸುತ್ತದೆ. ಇದರ ವಿರುದ್ದ ನೀವುಗಳು ಎಚ್ಚೆತ್ತಕೊಳ್ಳಬೇಕೆಂದು ವಿದ್ಯಾರ್ಥಿನಿಯರಲ್ಲಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮನವಿ ಮಾಡಿದರು.
ಮೂಢ ನಂಬಿಕೆ ಎಲ್ಲಾ ಧರ್ಮಗಳಲ್ಲಿಯೂ ಇದೆ. ಮೌಢ್ಯವನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ. ಮೌಢ್ಯದ ಹಿಂದಿರುವ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಿ. ಸಂವಿಧಾನದಲ್ಲಿ ಶೋಷಣೆಗೆ ಉತ್ತರ ಕಂಡುಕೊಳ್ಳಬೇಕಿದೆ. ಜ್ಞಾನ ಮತ್ತು ಬದುಕನ್ನು ಪ್ರಯೋಗಕ್ಕೆ ಒಳಪಡಿಸದಿದ್ದರೆ ಮೌಢ್ಯ ಮಹಿಳೆಯರನ್ನು ಸುತ್ತಿಕೊಳ್ಳುತ್ತದೆ. ವೈಜ್ಞಾನಿಕ ಚಿಂತನೆ ಪರಿಶ್ರಮವಿಲ್ಲದಿದ್ದರೆ ಬದುಕು ಯಶಸ್ವಿಯಾಗಲ್ಲ. ಸಾಮಾಜಿಕ ಜಾಲ ತಾಣಗಳಿಗೆ ಬಲಿಯಾಗಬೇಡಿ ಎಂದು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಧ್ಯಾಪಕ ಕಾರ್ಯದರ್ಶಿ ಡಾ.ಮಧುಸೂದನ್ ಪಿ.ಎನ್. ಮಾತನಾಡಿ ಬ್ರಾಹ್ಮಣ್ಯದಿಂದ ಹೆಣ್ಣು ಮಕ್ಕಳು ಮೌಢ್ಯಕ್ಕೆ ಒಳಗಾಗುತ್ತಿದ್ದಾರೆ. ಮೂಢ ನಂಬಿಕೆಯಿಂದ ಹೊರ ಬರಬೇಕಾದರೆ ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಳ್ಳಿ. ಅದಕ್ಕಾಗಿ ಶಿಕ್ಷಣವಂತರಾಗಿ ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡುತ್ತ ನಿಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಮೂಢನಂಬಿಕೆ, ಕಂದಾಚಾರಗಳನ್ನು ಪ್ರಶ್ನಿಸುವ ಧೈರ್ಯ ಮೊದಲು ನಿಮ್ಮಲ್ಲಿ ಮೂಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಆಧುನಿಕ ದೇಶಗಳಲ್ಲಿಯೂ ಹೆಣ್ಣು ಗಂಡಿನ ನಡುವೆ ಅಮಾನತೆಯಿದೆ. ಶಿಕ್ಷಣ, ಅರಿವು, ವೈಜ್ಞಾನಿಕ ಚಿಂತನೆಯಿರಬೇಕು. ವಿಜ್ಞಾನದ ದೃಷ್ಟಿಯಿಂದ ಸಮಾಜವನ್ನು ನೋಡಿ. ವೈಜ್ಞಾನಿಕ ಚಿಂತನೆ ಮೂಡಿಸಿಕೊಳ್ಳುವುದನ್ನು ಕಲಿಯದ ದೇಶ ನಾಶವಾಗುತ್ತದೆಂದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿ ಮಕ್ಕಳಲ್ಲಿ ಮೌಢ್ಯವನ್ನು ದೂರ ಮಾಡುವ ಉದ್ದೇಶದಿಂದ ಪ್ರೌಢಶಾಲೆ, ಪದವಿ ಹಾಗೂ ಬಿಇಡಿ. ಕಾಲೇಜಿನ ವಿದ್ಯಾರ್ಥಿಗಳಿಗೆ ಮೌಢ್ಯ ಮತ್ತು ವೈಚಾರಿಕ ಚಿಂತನೆ ಕಾರ್ಯಕ್ರಮಗಳನ್ನು ನಡೆಸುವುದು ನಮ್ಮ ಉದ್ದೇಶ. ಕಳೆದ ಮೂರು ವರ್ಷಗಳಿಂದಲೂ ಮೂಢ ನಂಬಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಡಾ.ಈ.ರುದ್ರಮುನಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜಯಲಕ್ಷ್ಮಮ್ಮ ಕೆ, ಐಕ್ಯುಎಸಿ. ಸಂಚಾಲಕ ಸತೀಶ್ ಹಲಸಂದಿ ಇವರುಗಳು ವೇದಿಕೆಯಲ್ಲಿದ್ದರು.

















