ಬೆಂಗಳೂರು.ಜುಲೈ.24: ರಾಜ್ಯದ ಸರ್ಕಾರಿ ನೌಕರರ ದಶಕಗಳ ಕಾಲದ ಕನಸಾಗಿದ್ದ ‘ಹಳೆಯ ಪಿಂಚಣಿ ಯೋಜನೆ’ (OPS) ಮರುಜಾರಿಗೊಳಿಸುವ ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ.
ಹೊಸ ಪಿಂಚಣಿ ಯೋಜನೆ (NPS) ರದ್ದುಪಡಿಸಿ ಒಪಿಎಸ್ ಜಾರಿಗೆ ತರುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅಧಿಕೃತವಾಗಿ ಪರಿಶೀಲನಾ ಸೂಚನೆ ನೀಡುವ ಮೂಲಕ ನೌಕರರ ವಲಯದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಲಭ್ಯವಿರುವ ಸುಮಾರು 5.7 ಲಕ್ಷ ಸರ್ಕಾರಿ ನೌಕರರ ಪೈಕಿ, 2006ರ ನಂತರ ಸೇವೆಗೆ ಸೇರಿದ ಸುಮಾರು 2.8 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಎನ್ಪಿಎಸ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕಾಂಗ್ರೆಸ್ ತಾನು ನೀಡಿದ್ದ ಚುನಾವಣಾ ಭರವಸೆಯಂತೆ ಈ ಯೋಜನೆಯನ್ನು ಮರುಜಾರಿಗೊಳಿಸಲು ಗಂಭೀರ ಚಿಂತನೆ ನಡೆಸುತ್ತಿದ್ದು, ಇದು ಜಾರಿಯಾದಲ್ಲಿ ಅಪಾರ ಸಂಖ್ಯೆಯ ನೌಕರರ ಕುಟುಂಬಗಳಿಗೆ ಅನುಕೂಲವಾಗಲಿದೆ.

ಹಣಕಾಸು ತಜ್ಞರು ಪಿಂಚಣಿ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಎದುರಾಗಬಹುದಾದ ಭವಿಷ್ಯದ ಆರ್ಥಿಕ ಹೊರೆಯನ್ನು ಎತ್ತಿಹಿಡಿದಿದ್ದಾರೆ. ಪ್ರಸ್ತುತ ವೇತನ ಹಾಗೂ ಪಿಂಚಣಿಗಾಗಿ ವರ್ಷಕ್ಕೆ ಸುಮಾರು ₹1.2 ಲಕ್ಷ ಕೋಟಿ ವೆಚ್ಚವಾಗುತ್ತಿದ್ದು, ನೌಕರರು ಸಾಲಸಾಲಾಗಿ ನಿವೃತ್ತರಾಗುವ ಸಮಯದಲ್ಲಿ ಬೊಕ್ಕಸಕ್ಕೆ ಸವಾಲಾಗಬಹುದು ಎಂಬ ಆತಂಕ ತಜ್ಞರಲ್ಲಿದೆ. ಆದರೂ, 7ನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ನೌಕರರಿಗೆ ಸಮಾನವಾದ ವೇತನ ಮತ್ತು ಪಿಂಚಣಿ ಸೌಲಭ್ಯ ಸಿಗಲಿದೆ ಎಂಬ ವಿಶ್ವಾಸದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಒಕ್ಕೂಟದ ಪ್ರಮುಖರಿದ್ದಾರೆ.









