ಬೆಂಗಳೂರು.ಜುಲೈ.23: ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ನಡೆದ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿರುವ ಶಿವಾಜಿನಗರ ಪೊಲೀಸರು, ಓರ್ವ ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪುಣ್ಯೇಶ್ ಎಂದು ಗುರುತಿಸಲಾಗಿದೆ. ಈತ ಘಟನೆಯ ದಿನದಂದು ಕಾಟನ್ ಬಾಕ್ಸ್ನಲ್ಲಿ ಹೆಚ್ಚಿನ ಸಂಖ್ಯೆಯ ಮೊಟ್ಟೆಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೆಪಿಸಿಸಿ ಕಚೇರಿಯಂತಹ ಪ್ರಮುಖ ಸ್ಥಳದಲ್ಲಿ ಈತ ಮೊಟ್ಟೆಗಳನ್ನು ಏಕಾಗಿ ಇಟ್ಟುಕೊಂಡಿದ್ದ? ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಈತನಿಗೆ ಸೂಚನೆ ನೀಡಿದ ಮಾಸ್ಟರ್ ಮೈಂಡ್ ಯಾರು? ಎಂಬಿತ್ಯಾದಿ ಕೋನಗಳಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮವನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿದ್ದ ಹೋರಾಟದ ವಿರುದ್ಧ ಬಿಜೆಪಿ ಸಹ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬಿಜೆಪಿ ನಾಯಕರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ತೀವ್ರ ಉದ್ವಿಗ್ನತೆ ಉಂಟಾಗಿತ್ತು. ಆ ಸಮಯದಲ್ಲಿ ಸ್ಥಳದಲ್ಲಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರತ್ತ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದರು.









