Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ರೈತರಿಗೆ ಸಿಹಿಸುದ್ದಿ: ಮುಂಗಾರು ಹಂಗಾಮಿಗೆ ಅಗತ್ಯ ಬಿತ್ತನೆ ಬೀಜ ಲಭ್ಯ

---Advertisement---

ಸುದ್ದಿಒನ್,ಬೆಂಗಳೂರು,ಮೇ.23: ಮುಂಗಾರು ಹಂಗಾಮಿಗೆ ಬೇಕಾಗುವಷ್ಟು ಬಿತ್ತನೆ ಬೀಜಗಳು ರಾಜ್ಯದಲ್ಲಿ ಸಮೃದ್ಧವಾಗಿ ದಾಸ್ತಾನಿದ್ದು, ರೈತ ಬಾಂಧವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಧೈರ್ಯ ತುಂಬಿದ್ದಾರೆ.

ಸದ್ಯ ಹಾವೇರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ, ರೈತರು ಬಿತ್ತನೆ ಕಾರ್ಯಕ್ಕೆ ಚುರುಕಿನಿಂದ ಸಜ್ಜಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ (RSK) ಬೀಜ ಖರೀದಿಗಾಗಿ ರೈತರ ಧಾವಂತ ಹೆಚ್ಚಾಗಿದೆ. ಪರಿಸ್ಥಿತಿಯನ್ನು ಅರಿತಿರುವ ಕೃಷಿ ಇಲಾಖೆ, ಜಿಲ್ಲೆಯಾದ್ಯಂತ ಯಾವುದೇ ಕೊರತೆಯಾಗದಂತೆ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ವಿತರಿಸಲು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದಲ್ಲಿ ಈ ಬಾರಿ ಬಿತ್ತನೆ ಬೀಜಗಳ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಯಾಬಿನ್: ಹಾವೇರಿ ಜಿಲ್ಲೆಯೊಂದಕ್ಕೇ ಸುಮಾರು 8,960 ಕ್ವಿಂಟಲ್ ಸೋಯಾಬಿನ್ ಅಗತ್ಯವಿದ್ದು, ಇಡೀ ರಾಜ್ಯಾದ್ಯಂತ 1.80 ಲಕ್ಷ ಕ್ವಿಂಟಲ್ ಬೇಡಿಕೆ ಇದೆ. ಆದರೆ ನಮ್ಮ ಬಳಿ ಬರೋಬ್ಬರಿ 2.09 ಲಕ್ಷ ಕ್ವಿಂಟಲ್ ಸೋಯಾಬಿನ್ ಬೀಜ ರೆಡಿಯಾಗಿದೆ.

ಹಾವೇರಿಗೆ 1,344 ಕ್ವಿಂಟಲ್ ಶೇಂಗಾ ಬೀಜದ ಅಗತ್ಯವಿದ್ದರೆ, ಇಡೀ ರಾಜ್ಯಕ್ಕೆ 70,000 ಕ್ವಿಂಟಲ್ ಬೇಡಿಕೆ ಇದೆ. ಸದ್ಯ ಇಲಾಖೆಯ ಬಳಿ 74,000 ಕ್ವಿಂಟಲ್ ದಾಸ್ತಾನು ಲಭ್ಯವಿದೆ.ಸಮಗ್ರವಾಗಿ ನೋಡುವುದಾದರೆ, ರಾಜ್ಯದಲ್ಲಿ ಎಲ್ಲಾ ಮಾದರಿಯ ಬೆಳೆಗಳಿಗೆ ಒಟ್ಟು 4.71 ಲಕ್ಷ ಕ್ವಿಂಟಲ್ ಬೀಜದ ಅಗತ್ಯವಿದೆ. ಆದರೆ ಕೃಷಿ ಇಲಾಖೆಯು ಮುಂಜಾಗ್ರತೆಯಾಗಿ 5.46 ಲಕ್ಷ ಕ್ವಿಂಟಲ್ ಬಿತ್ತನೆ ಬೀಜವನ್ನು ಸಂಗ್ರಹಿಸಿಟ್ಟುಕೊಂಡಿದೆ.

ರೈತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಗುಣಮಟ್ಟದ ಬಿತ್ತನೆ ಬೀಜಗಳು ಗೋದಾಮುಗಳಲ್ಲಿ ಸಿದ್ಧವಾಗಿವೆ. ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದ ದಾಸ್ತಾನು ಇರುವುದರಿಂದ ರೈತರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಹೇಳಿದ್ದಾರೆ.

Join WhatsApp

Join Now

Join Telegram

Join Now