ಬೆಂಗಳೂರು.ಜೂನ್.21: ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರವು ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿವಿಧ ಉದ್ದೇಶಗಳಿಗಾಗಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೇಕಾಗುವ ‘ವಾಸಸ್ಥಳ ದೃಢೀಕರಣ ಪತ್ರ’ವನ್ನು (Residence Certificate) ಇನ್ಮುಂದೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಪಡೆಯಲು ಅವಕಾಶ ಕಲ್ಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಇದುವರೆಗೆ ಗ್ರಾಮೀಣ ಭಾಗದ ನಾಗರಿಕರು ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಹೋಬಳಿ ಕೇಂದ್ರಗಳಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು. ಇದರಿಂದ ತುರ್ತು ಸಂದರ್ಭಗಳಲ್ಲಿ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿತ್ತು ಮತ್ತು ಸಾರ್ವಜನಿಕರು ಅಲೆದಾಡುವಂತಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಾಸಸ್ಥಳ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ವಹಿಸಿ ಆದೇಶಿಸಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಯಾವುದೇ ರೀತಿಯ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕವೇ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶವನ್ನು ಬಳಸಿಕೊಂಡು ಈ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ತಮ್ಮ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಒಂದು ಬಾರಿಗೆ ಅಭಿಯಾನದ ಮಾದರಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಈ ಪತ್ರವನ್ನು ನೀಡಲು ಸೂಚಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರಿಗೆ ಯಾವುದೇ ವಿಳಂಬವಿಲ್ಲದೆ, ಸ್ಥಳೀಯವಾಗಿಯೇ ಅತ್ಯಂತ ಸುಲಭವಾಗಿ ಮತ್ತು ಉಚಿತವಾಗಿ ವಾಸಸ್ಥಳ ದೃಢೀಕರಣ ಪತ್ರ ಸಿಗುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಪ್ರಮಾಣ ಪತ್ರ ನೀಡಲು ಅಗತ್ಯವಿರುವ ದಾಖಲೆಗಳು ಮತ್ತು ಕಾರ್ಯವಿಧಾನದ ಕುರಿತು ಸರ್ಕಾರವು ಶೀಘ್ರದಲ್ಲೇ ಪ್ರತ್ಯೇಕ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.






