ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ತನ್ನ ಕೋಟ್ಯಂತರ ಖಾತೆದಾರರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಪಿಎಫ್ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಚಂದಾದಾರರಿಗೆ ವೇಗವಾಗಿ ತಲುಪಿಸುವ ಉದ್ದೇಶದಿಂದ ಅಧಿಕೃತ ವಾಟ್ಸಪ್ ಚಾನೆಲ್ ಆರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸೇವೆಗಳನ್ನು ವ್ಯಾಪಕವಾಗಿ ವಿಸ್ತರಿಸುತ್ತಿರುವ ಭವಿಷ್ಯ ನಿಧಿ ಸಂಸ್ಥೆ, ಈಗ ಬಹುತೇಕ ಎಲ್ಲರೂ ಬಳಸುವ ವಾಟ್ಸಪ್ ಮೂಲಕವೇ ಅಗತ್ಯ ಸೇವಾ ವಿವರಗಳನ್ನು ಒದಗಿಸಲು ಈ ಹೊಸ ಹೆಜ್ಜೆ ಇಟ್ಟಿದೆ.
ಮೊಬೈಲ್ನಲ್ಲೇ ಸಿಗಲಿದೆ ಪ್ರಮುಖ ಅಪ್ಡೇಟ್ಸ್
ಈ ಹೊಸ ವಾಟ್ಸಪ್ ಚಾನೆಲ್ ಮೂಲಕ ಪಿಎಫ್ ಖಾತೆದಾರರಿಗೆ ಹತ್ತು ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇಪಿಎಫ್ಒ ಜಾರಿಗೆ ತರುವ ಹೊಸ ನಿಯಮಗಳು, ಯೋಜನೆಗಳು, ಅಧಿಕೃತ ಪ್ರಕಟಣೆಗಳು, ತಿದ್ದುಪಡಿಗಳು ಹಾಗೂ ಅಧಿಸೂಚನೆಗಳ ಮಾಹಿತಿಯನ್ನು ಚಂದಾದಾರರು ನೇರವಾಗಿ ತಮ್ಮ ಮೊಬೈಲ್ನಲ್ಲೇ ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ವಾಟ್ಸಪ್ ಚಾಟ್ಬಾಟ್ ಸೇವೆಯನ್ನು ತರಲು ಕೂಡ ಇಪಿಎಫ್ಒ ಸಿದ್ಧತೆ ನಡೆಸುತ್ತಿದ್ದು, ಭವಿಷ್ಯದಲ್ಲಿ ವಾಟ್ಸಪ್ನಲ್ಲೇ ಪಿಎಫ್ ಬ್ಯಾಲೆನ್ಸ್ ಹಾಗೂ ಕ್ಲೈಮ್ ಸ್ಟೇಟಸ್ ಪರಿಶೀಲಿಸುವ ಅವಕಾಶವೂ ಸಿಗಲಿದೆ.
ವಾಟ್ಸಪ್ ಚಾನೆಲ್ಗೆ ಸೇರ್ಪಡೆಯಾಗುವುದು ಹೇಗೆ?
ಇಪಿಎಫ್ಒ ವಾಟ್ಸಪ್ ಚಾನೆಲ್ ಸೇರಲು ಸಂಸ್ಥೆಯು ಸರಳ ಮಾರ್ಗಗಳನ್ನು ನೀಡಿದೆ. ಇಪಿಎಫ್ಒ ಹಂಚಿಕೊಂಡಿರುವ ನೇರ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಬಹುದು. ಸಂಸ್ಥೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ಚಾನೆಲ್ ಪ್ರವೇಶಿಸಬಹುದು. ಇದಲ್ಲದೆ ವಾಟ್ಸಪ್ನ ‘ಅಪ್ಡೇಟ್ಸ್’ ವಿಭಾಗಕ್ಕೆ ತೆರಳಿ ಸರ್ಚ್ ಬಾಕ್ಸ್ನಲ್ಲಿ ‘EPFO’ ಎಂದು ಹುಡುಕಿ, ಬ್ಲೂ ಟಿಕ್ ಹೊಂದಿರುವ ವೆರಿಫೈಡ್ ಖಾತೆಯನ್ನು ಸುಲಭವಾಗಿ ಫಾಲೋ ಮಾಡಬಹುದಾಗಿದೆ.
ನಕಲಿ ಸುದ್ದಿಗಳಿಗೆ ಬೀಳಲಿದೆ ಬ್ರೇಕ್
ಈ ವಾಟ್ಸಪ್ ಚಾನೆಲ್ನಿಂದಾಗಿ ಪ್ರತಿಯೊಂದು ಸಣ್ಣ ಮಾಹಿತಿಗಾಗಿ ಪ್ರಾದೇಶಿಕ ಪಿಎಫ್ ಕಚೇರಿಗಳಿಗೆ ಅಲೆಯುವುದು ಅಥವಾ ಪದೇಪದೇ ವೆಬ್ಸೈಟ್ ಪರಿಶೀಲಿಸುವುದು ತಪ್ಪಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಬಿದ್ದು, ನೇರವಾಗಿ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಗಲಿದೆ. ಆದರೆ ಈ ಚಾನೆಲ್ ಕೇವಲ ಮಾಹಿತಿ ಮತ್ತು ಅಪ್ಡೇಟ್ಗಳನ್ನು ತಿಳಿಯಲು ಮಾತ್ರ ಸೀಮಿತವಾಗಿದ್ದು, ಹಣ ಹಿಂಪಡೆಯುವುದು ಅಥವಾ ಖಾತೆಯ ವಿವರ ತಿದ್ದುಪಡಿ ಮಾಡುವಂತಹ ವೈಯಕ್ತಿಕ ಸೇವೆಗಳನ್ನು ಇಲ್ಲಿ ನಿರ್ವಹಿಸಲು ಸಾಧ್ಯವಿಲ್ಲ.












