Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಈ ವರ್ಷ ಮೆಡಿಕಲ್ ಕೋರ್ಸ್‌ ಗಳ ಶುಲ್ಕ ಹೆಚ್ಚಳವಿಲ್ಲ

---Advertisement---

ಬೆಂಗಳೂರು: ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರ ದೊಡ್ಡ ನಿರಾಳತೆ ನೀಡಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದ್ದು, ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸಲು ತೀರ್ಮಾನಿಸಿದೆ.

ಈ ಕುರಿತು ವಿಧಾನಸೌಧದಲ್ಲಿ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಇಡಲು ಮುಂದಾಗಿದ್ದರೂ ಸರ್ಕಾರ ಅದಕ್ಕೆ ಅವಕಾಶ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನೀಟ್ ಪರೀಕ್ಷೆಯ ಗೊಂದಲ ಹಾಗೂ ಮರು ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಈಗಾಗಲೇ ತೀವ್ರ ಒತ್ತಡದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕ ಹೆಚ್ಚಳ ಮಾಡಿ ಅವರಿಗೆ ಮತ್ತಷ್ಟು ಹೊರೆ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡಕ್ಕೂ ಅನ್ವಯವಾಗಲಿದೆ.

ಈ ತೀರ್ಮಾನದ ಅನ್ವಯ ವೈದ್ಯಕೀಯ ಕೋರ್ಸ್‌ಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ 55,000 ರೂಪಾಯಿ ಶುಲ್ಕ ಇರಲಿದ್ದು, ಕೆಪಿಸಿಎಫ್‌, ಕೆಆರ್‌ಎಲ್‌ಎಂಪಿಸಿಎ, ಎಎಂಪಿಸಿಕೆ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಸರ್ಕಾರಿ ಕೋಟಾದ ಸೀಟುಗಳಿಗೆ 1,41,621 ರೂಪಾಯಿ ನಿಗದಿಯಾಗಿದೆ.
ಇನ್ನು ಖಾಸಗಿ ಕೋಟಾದ ಸೀಟುಗಳಿಗೆ ಕೆಪಿಸಿಎಫ್‌, ಕೆಆರ್‌ಎಲ್‌ಎಂಪಿಸಿಎ ಮತ್ತು ಎಎಂಪಿಸಿಕೆ ಅಡಿಯಲ್ಲಿ 11,88,167 ರೂಪಾಯಿ ಶುಲ್ಕ ಮುಂದುವರಿಯಲಿದೆ. ದಂತ ವೈದ್ಯಕೀಯ ಕೋರ್ಸ್‌ಗಳ ವಿವರ ನೋಡುವುದಾದರೆ, ಸರ್ಕಾರಿ ಕಾಲೇಜುಗಳ ಕೋಟಾ ಸೀಟುಗಳಿಗೆ 40,000 ರೂಪಾಯಿ ಹಾಗೂ ಕೆಪಿಸಿಎಫ್‌, ಕೆಆರ್‌ಎಲ್‌ಎಂಪಿಸಿಎ, ಎಎಂಪಿಸಿಕೆ ಸರ್ಕಾರಿ ಕೋಟಾ ಸೀಟುಗಳಿಗೆ 83,358 ರೂಪಾಯಿ ಇರಲಿದೆ.
ಇದೇ ವೇಳೆ ದಂತ ವೈದ್ಯಕೀಯದ ಖಾಸಗಿ ಕೋಟಾದಡಿ ಬರುವ ಕೆಪಿಸಿಎಫ್‌, ಕೆಆರ್‌ಎಲ್‌ಎಂಪಿಸಿಎ ಮತ್ತು ಎಎಂಪಿಸಿಕೆ ಸೀಟುಗಳಿಗೆ 7,32,625 ರೂಪಾಯಿ ಶುಲ್ಕ ಇರಲಿದ್ದು, ಕಳೆದ ಸಾಲಿನ ಈ ಎಲ್ಲಾ ದರಗಳೇ ಪ್ರಸಕ್ತ ವರ್ಷವೂ ಯಾವುದೇ ಬದಲಾವಣೆಯಿಲ್ಲದೆ ಜಾರಿಯಲ್ಲಿರಲಿವೆ.

Join WhatsApp

Join Now

Join Telegram

Join Now