ಸುದ್ದಿಒನ್, ಬೆಂಗಳೂರು, ಮೇ. 06 : ಕರ್ನಾಟಕ ಸರ್ಕಾರವು ವಿವಾಹದ ಆಯ್ಕೆಯಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ಅಧಿನಿಯಮ, 2026’ ಅನ್ನು ಮೇ 05, 2026ರಿಂದ ಜಾರಿಗೆ ತರಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯವು (ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ) ಈ ಕುರಿತು ಅಧಿಕೃತ ರಾಜ್ಯಪತ್ರವನ್ನು ಹೊರಡಿಸಿದೆ.2026ರ ಕರ್ನಾಟಕ ಅಧಿನಿಯಮ ಸಂಖ್ಯೆ 23ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕಾಯ್ದೆಯ ಎಲ್ಲಾ ಉಪಬಂಧಗಳು ಮೇ 05, 2026ರಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶಿಸಿದೆ.

ವಿವಾಹದ ವಿಷಯದಲ್ಲಿ ವ್ಯಕ್ತಿಯ ಸ್ವತಂತ್ರ ನಿರ್ಧಾರವನ್ನು ಗೌರವಿಸುವುದು ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಹಾಗೂ ಅಪರಾಧಗಳಿಗೆ ಕಾನೂನುಬದ್ಧವಾಗಿ ಬ್ರೇಕ್ ಹಾಕುವುದು ಈ ಕಾಯ್ದೆಯ ಮುಖ್ಯ ಗುರಿಯಾಗಿದೆ.ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಉಪ ಕಾರ್ಯದರ್ಶಿಗಳಾದ ಶ್ರೀನಿವಾಸ ಎ. ಅವರು ಪ್ರಕಟಿಸಿದ್ದಾರೆ.


















