ಸುದ್ದಿಒನ್, ಚಿತ್ರದುರ್ಗ, ಮೇ. 06 : ಕರ್ತವ್ಯದ ವೇಳೆ ಮದ್ಯಪಾನ ಮತ್ತು ಗುಟ್ಕಾ ಸೇವನೆ ಸೇರಿದಂತೆ ಗಂಭೀರ ದುರ್ನಡತೆಯ ಆರೋಪ ಎದುರಿಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೈದ್ಯಾಧಿಕಾರಿಯೊಬ್ಬರನ್ನು ಸರ್ಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ|| ಚಂದ್ರಮೌಳಿ ಎಸ್. ಅವರು ಅಮಾನತುಗೊಂಡವರು. ಫೆಬ್ರವರಿ 8, 2025 ರಂದು ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿದ್ದ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಅಡುಗೆ ಕೋಣೆಯಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಇಟ್ಟುಕೊಂಡಿರುವುದು ಕಂಡುಬಂದಿತ್ತು.

ತನಿಖಾ ವರದಿಯ ಪ್ರಕಾರ ವೈದ್ಯರ ಮೇಲೆ ಈ ಕೆಳಗಿನ ಗಂಭೀರ ಆರೋಪಗಳು ಸಾಬೀತಾಗಿವೆ.ವೈದ್ಯಾಧಿಕಾರಿಯು ರಾತ್ರಿ ವೇಳೆ ಮದ್ಯಪಾನ ಮತ್ತಿತರ ಮಾದಕ ದ್ರವ್ಯಗಳನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದರು.ಇದನ್ನು ಪ್ರಶ್ನಿಸಿದ ಸಹೋದ್ಯೋಗಿ ಡಾ|| ಹನುಮಂತರಾಯ ಅವರೊಂದಿಗೆ ಗಲಾಟೆ ಮಾಡಿ ವಿಡಿಯೋ ಮಾಡಿಕೊಂಡಿದ್ದರು.ಡಾ|| ಚಂದ್ರಮೌಳಿ ಅವರು ಯಾವಾಗಲೂ ಮದ್ಯಪಾನ ಹಾಗೂ ಗುಟ್ಕಾ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಸಿಬ್ಬಂದಿಗಳು ಲಿಖಿತ ಹೇಳಿಕೆ ನೀಡಿದ್ದಾರೆ.
ಇವರ ವರ್ತನೆಯಿಂದ ಆಸ್ಪತ್ರೆಯಲ್ಲಿ ಕಾನೂನುಬಾಹಿರ ಕೆಲಸಗಳಿಗೆ ಅಡಚಣೆಯಾಗುತ್ತಿತ್ತು ಮತ್ತು ಪದೇ ಪದೇ ಗಲಾಟೆಗಳು ನಡೆಯುತ್ತಿದ್ದವು.
ಬೆಂಗಳೂರು ವಿಭಾಗದ ಸಹ ನಿರ್ದೇಶಕರು ನಡೆಸಿದ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಗುರುದತ್ತ ಹೆಗಡೆ (ಭಾ.ಆ.ಸೇ.) ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ಅನ್ವಯ ಡಾ|| ಚಂದ್ರಮೌಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಇವರನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದೆಂದು ಸೂಚಿಸಲಾಗಿದೆ.


















