ಸುದ್ದಿಒನ್, ಹಿರಿಯೂರು, ಜುಲೈ. 02 : ಕೃಷಿ ಚಟುವಟಿಕೆಗಳ ಜೊತೆಗೆ ಬಡ ಕುಟುಂಬಗಳು ಆರ್ಥಿಕವಾಗಿ ಸಬಲೀಕರಣ ಹೊಂದಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಶಿಮುಲ್ ನಿರ್ದೇಶಕ ಜಿಬಿ. ಶೇಖರಪ್ಪ ಹೇಳಿದರು.
ನಗರದ ಅನ್ನಪೂರ್ಣಶ್ವರಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮಾಸಿಕ ಪ್ರಗತಿ ಪರಿಶೀಲನ ಸಭೆ ಕುರಿತು ಮಾತನಾಡಿದರು.
ಜಿಲ್ಲೆಯ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಹಿರಿಯೂರು ಮೊದಲ ಸ್ಥಾನ ಕಾಯ್ದುಕೊಂಡಿದೆ. ಹೈನುಗಾರಿಕೆಯಿಂದ ಅಧಿಕ ಲಾಭವಿದ್ದು, ಎಲ್ಲರೂ ಕೃಷಿಯೊಂದಿಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ. ಹೈನುಗಾರಿಕೆಯಿಂದ ಭೂಮಿಗೆ ಸಾವಯವ ಗೊಬ್ಬರ ದೊರಕಲಿದ್ದು, ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ತಾಲೂಕಿನಲ್ಲಿ ವಿವಿಸಾಗರ ಜಲಾಶಯ ಇದ್ದು ನೀರಿನ ಕೊರತೆ ಕಡಿಮೆ ಇರುವುದರಿಂದ ಈ ಭಾಗದಲ್ಲಿ ಹೈನುಗಾರಿಕೆ ಹೆಚ್ಚಳವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಸಣ್ಣಪುಟ್ಟ ಕುಟುಂಬಗಳ ಸಮಸ್ಯೆಗಳಿಗೆ ಹೈನುಗಾರಿಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಚಳ್ಳಕೆರೆ ನಿರ್ದೇಶಕ ಬಿಸಿ. ಸಂಜೀವಮೂರ್ತಿ ಮಾತನಾಡಿ ತಾಲೂಕಿನಲ್ಲಿ 68 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಅದರಲ್ಲಿ 14 ಬಿಎಂಸಿ ಕೇಂದ್ರಗಳಿವೆ. ಇನ್ನು 8 ಬಿಎಂಸಿ ಕೇಂದ್ರ ಹೊಸದಾಗಿ ಆರಂಭಗೊಳ್ಳಲಿವೆ.
ಇದರಿಂದ ಪ್ರತಿನಿತ್ಯ 50,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ನಾವು ನಡೆಯುತ್ತಿದ್ದು, 2024 – 2025ನೇ ಸಾಲಿನಲ್ಲಿ ತಾಲೂಕಿನಲ್ಲಿ 5,624 ಹಸುಗಳಿಗೆ ವಿಮೆ ಮಾಡಿಕೊಡಲಾಗಿದೆ. ಆಕಸ್ಮಿಕವಾಗಿ ಮೃತಪಟ್ಟ 84 ಹಸುಗಳಿಗೆ ವಿಮೆ ಹಣ ಪಾವತಿಸಲಾಗಿದೆ. 23 ಮಂದಿಗೆ ಮಿಲ್ಕ್ ಮಷೀನ್, 950 ರಬ್ಬರ್ ಮ್ಯಾಟ್ ಕೊಡಲಾಗಿದೆ. ಹಿರಿಯೂರು ಹಾಲಿನ ಉತ್ಪಾದನೆಯಲ್ಲೂ ಸಹ ಏರಿಕೆ ಖಂಡಿದೆ. ಸುಮಾರು 5 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯನ್ನ ದಾವಣಗೆರೆಯಲ್ಲಿ ನಿರ್ಮಾಣ ಮಾಡುತ್ತಿದ್ದು, ಬರುವ ಸೋಮವಾರ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಿದೆ. ಅಲ್ಲದೆ ಚಿತ್ರದುರ್ಗದಲ್ಲೂ ಸಹ 23 ಕೋಟಿ ವೆಚ್ಚದಲ್ಲಿ ನೂತನ ಹಾಲಿನ ಶೀತಲೀಕರಣ ಕೇಂದ್ರವನ್ನು ಆರಂಭಿಸಲು ಭೂಮಿ ಪೂಜೆ ಮಾಡಲಾಗುವುದು ಎಂದು ತಿಳಿಸಿದರು.
ಹೊಸದುರ್ಗ ನಿರ್ದೇಶಕ ಬಿ. ಆರ್. ರವಿಕುಮಾರ್ ಮಾತನಾಡಿ ಶಿಮುಲ್ ದೊಡ್ಡ ಸಂಸ್ಥೆಯಾಗಿದ್ದು, ದಕ್ಷತೆಯಲ್ಲಿ ಮೊದಲ ಸ್ಥಾನ ತಲುಪುವ ಜೊತೆಗೆ ಉತ್ತಮವಾದ ಗುಣಮಟ್ಟ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ. ಜಿಲ್ಲೆಯ ಡೈರಿ ಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಏರಿಕೆ ಕಂಡಿದೆ. ಆಗಾಗಿ ಹಾಲಿನ ಕ್ಯಾನ್ ಗಳ ಸಮಸ್ಯೆ ಉಂಟಾಗಿದೆ. ಶಿಮುಲ್ ಡೖರಿಗೆ ಕ್ಯಾನ್ ಗಳು ಬಂದಿದ್ದು, ಎರಡ್ಮೂರು ದಿನಗಳಲ್ಲಿ ಕ್ಯಾನ್ ವಿತರಣೆ ಮಾಡಲಾಗುವುದು. ಡೈರಿಗಳ ಅದ್ಯಕ್ಷರು ಹಾಗೂ ಕಾರ್ಯದರ್ಶಿಗಳು ಗುರಿಯ ಕಡೆ ಗಮನ ಹರಿಸಬೇಕು. ನಾವು ಸಭೆಯಲ್ಲಿ ರೈತರ ಹಿತ ಕಾಪಡಲು ರೈತಪರ ಚಿಂತನೆಗಳನ್ನು ಚರ್ಚಿಸಿದ್ದೇವೆ. ಇನ್ಸ್ಯೂರೆನ್ಸ್ ನಲ್ಲಿ ಬದಲಾವಣೆ ಮಾಡಿದ್ದು, ತ್ವರಿತ ಗತಿಯಲ್ಲಿ ಹಣ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿಮುಲ್ ನಿರ್ದೇಶಕ ಜೆ.ಪಿ. ರೇವಣಸಿದ್ಧಪ್ಪ ಮಾತನಾಡಿ
ನಗರದ ಎಪಿಎಂಸಿ ಆವರಣದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 50ಲಕ್ಷ ವೆಚ್ಚದಲ್ಲಿ ಹಾಲು ಉತ್ಪಾದಕರ ಕಛೇರಿ ನಿರ್ಮಾಣ ಮಾಡಲಾಗುವುದು. ಸುಮಾರು 300ಕೋಟಿ ರೂಪಾಯಿ ವೆಚ್ಚದ ದಾವಣಗೆಯಲ್ಲಿ ಮೆಗಾ ಡೈರಿ ನಿರ್ಮಾಣಕ್ಕೆ ಇದೇ ತಿಂಗಳ 6ರಂದು ಭೂಮಿ ಪೂಜೆ ನಡೆಯಲಿದ್ದು, 2028ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ಪುಟ್ಟರಾಜು, ವಿಸ್ತರಣಾಧಿಕಾರಿ ಕೃಷ್ಣಕುಮಾರ್, ನಿವೃತ್ತ ವಿಸ್ತರಣಾಧಿಕಾರಿ ಕೃಷ್ಣಪ್ಪ, ಮನೋಹರ್, ಸುರೇಶ್ ಬಾಬು, ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿದ್ದರು.





















