ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 04 : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧ್ಯಕ್ಷ ಮತ್ತು ಇತರೆ ಪದಾಧಿಕಾರಿಗಳನ್ನು ಮೊಟ್ಟಮೊದಲ ಬಾರಿಗೆ ನೇರವಾಗಿ ಚುನಾವಣೆಯ ಮೂಲಕ ಆಯ್ಕೆಮಾಡುವ ಸದಾವಕಾಶ ಈ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಹೊಂದಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ ಆರ್ ಮಲ್ಲೇಶ್ ತಿಳಿಸಿದರು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಜಿಲ್ಲಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. 2011 ರ ಹಳೆಯ ಬೈಲಾದ ಪ್ರಕಾರ ತಾಲ್ಲೂಕು ಮಟ್ಟದ ಪದಾಧಿಕಾರಿಗಳನ್ನು ಮಾತ್ರ ಆಯಾ ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರುಗಳು ಆಯ್ಕೆ ಮಾಡುತ್ತಿದ್ದರು. ಆಯ್ಕೆಯಾದ ತಾಲ್ಲೂಕು ಪ್ರತಿನಿಧಿಗಳು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು,ಜಿಲ್ಲಾ ಪದಾಧಿಕಾರಿಗಳು ರಾಜ್ಯ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ರಾಜ್ಯದ ಬಹುಸಂಖ್ಯೆಯ ಉಪನ್ಯಾಸಕರ ಅಭಿಪ್ರಾಯವನ್ನು ಕಡೆಗಾಣಿಸಲಾಗುತಿತ್ತು. ಆದರೆ 2024ರ ಹೊಸ ಬೈಲಾದ ಪ್ರಕಾರ ರಾಜ್ಯದ ನೊಂದಾಯಿತ ಎಲ್ಲಾ ಉಪನ್ಯಾಸಕರು ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ 9 ಜನ ಪದಾಧಿಕಾರಿಗಳಾದ1.ಅಧ್ಯಕ್ಷ,2 .ಪ್ರಧಾನ ಕಾರ್ಯದರ್ಶಿ 3.ಕಾರ್ಯಾಧ್ಯಕ್ಷರು, 4.ಖಜಾಂಚಿ,5.ಉಪಾಧ್ಯಕ್ಷರು,6.ಪ್ರಧಾನ ಕಾರ್ಯ ಸಂಘಟನಾ ಕಾರ್ಯದರ್ಶಿ 7.ಕಾರ್ಯದರ್ಶಿ8.ಜಂಟಿ ಕಾರ್ಯದರ್ಶಿ ಹಾಗೂ9.ಸಂಚಾಲಕರನ್ನು ಆಯ್ಕೆಮಾಡುವ ಅವಕಾಶ ಕಲ್ಪಿಸಿದೆ.ಒಂಬತ್ತು ಜನ ಕಾರ್ಯಕಾರಿ ಸದಸ್ಯರಲ್ಲಿ ಒಂದು ಸ್ಥಾನವನ್ನು ಕಡ್ಡಾಯವಾಗಿ ಮಹಿಳೆಯರಿಗೆ ಮೀಸಲಾಗಿಡಬೇಕಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ತಮ್ಮ ನೆಚ್ಚಿನ ಪ್ರತಿನಿಧಿಗೆ ಮತದಾನ ಮಾಡಲು ಸಂಘದ ಸದಸ್ಯತ್ವವನ್ನು ಹೊಂದಿರಬೇಕು.ಆದ್ದರಿಂದ ಈ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹಾಗೂ ಉಪನ್ಯಾಸಕರ ಹಿತ ಕಾಪಾಡುವ ಉತ್ತಮ ಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಸಂಘವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಚಿತ್ರದುರ್ಗ ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ ದಿನಾಂಕ: 27/4/2026 ರಿಂದ 07/05/2026 ರ ವರೆಗೆ ಸದಸ್ಯತ್ವ ನೊಂದಣಿಗಾಗಿ ಆನ್‍ಲೈನ್ ಮತ್ತು ಆಫ್‍ಲೈನ್ ಎರಡು ವಿಧಾನದಲ್ಲಿ ಅವಕಾಶ ನೀಡಲಾಗಿದೆ.

ದಿನಾಂಕ:08/05/2026 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ದಿನಾಂಕ:08/05/2026 ರಿಂದ ದಿನಾಂಕ:15/05/2026 ರ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ನಂತರದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿ ಜೂನ್ ಮೊದಲ ವಾರದಲ್ಲಿ ಚುನಾವಣೆ ನಡೆಸಲಾಗುವುದು ಎಂದರು.
ಜಿಲ್ಲಾ ಸಂಘದ ಕೋಶಾಧ್ಯಕ್ಷರಾದ ಎನ್.ಕೆಂಚವೀರಪ್ಪ ಮಾತಾನಾಡಿ ಆನ್ ಲೈನ್ ಮೂಲಕ ನೊಂದಾಣಿಗಾಗಿ ಈ ಕೆಳಗಿನ ಲಿಂಕ್ https://kspucla.co.in ಬಳಸಬಹುದು ಎಂದರು.
ಸಭೆಯಲ್ಲಿ ಹೊಳಲ್ಕೆರೆ ತಾಲ್ಲೂಕಿನ ಅಧ್ಯಕ್ಷರಾದ ಆರ್.ಚಂದ್ರಶೇಖರ್, ಚಳ್ಳಕೆರೆ ತಾಲ್ಲೂಕಿನ ಕಾರ್ಯಾಧ್ಯಕ್ಷರಾದ ಅಶ್ವತ್ಥ ರೆಡ್ಡಿ, ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಡಾ.ಜೆ ಮೋಹನ ಮತ್ತಿತರರು ಉಪಸ್ಥಿತರಿದ್ದರು



















