ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಸಂಬಂಧ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2 ಕೋಟಿಗೂ ಅಧಿಕ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ವಿತರಿಸುವ ಸಾಧ್ಯತೆಗಳಿವೆ. ಈ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ವಿಶೇಷ ಉದ್ದೇಶಿತ ವಾಹನ (SPV) ಒಂದನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್ ಸ್ವರೂಪ, ತಾಂತ್ರಿಕ ನೆರವು, ಟೆಂಡರ್ ಪ್ರಕ್ರಿಯೆ ಮತ್ತು ವಿತರಣಾ ವಿಧಾನಗಳ ಕುರಿತು ಸಾರಿಗೆ ನಿಗಮಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ‘ವಹಿವಾಟು ಸಲಹೆಗಾರರ ಸಮಿತಿ’ಯನ್ನು ನೇಮಕ ಮಾಡಲಾಗಿದೆ. ಈ ಸಮಿತಿಯು ಪ್ರಸಕ್ತ ತಿಂಗಳ ಅಂತ್ಯದೊಳಗೆ ತನ್ನ ವರದಿಯನ್ನು ನೀಡಲಿದ್ದು, ಅದರ ಆಧಾರದ ಮೇಲೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಕೋಟ್ಯಂತರ ಸ್ಮಾರ್ಟ್ ಕಾರ್ಡ್ಗಳ ವಿತರಣೆ ಅಗತ್ಯವಿರುವುದರಿಂದ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ಉಚಿತವಾಗಿ ನೀಡಲಾಗುವುದು. ಪುರುಷ ಪ್ರಯಾಣಿಕರು ನಿಗದಿತ ಹಣ ಪಾವತಿ ಮಾಡುವ ಆಧಾರದ ಮೇಲೆ ಸ್ಮಾರ್ಟ್ ಕಾರ್ಡ್ಗಳನ್ನು ಖರೀದಿಸಬೇಕಾಗುತ್ತದೆ. ಮಹಿಳಾ ಮತ್ತು ಪುರುಷ ಪ್ರಯಾಣಿಕರಿಬ್ಬರನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ರಾಜ್ಯದಲ್ಲಿ ಸುಮಾರು 2.5 ಕೋಟಿಯಿಂದ 3 ಕೋಟಿ ಕಾರ್ಡ್ಗಳ ಅವಶ್ಯಕತೆ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.














