ಬಡ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡಿದರೆ ಉಗ್ರ ಹೋರಾಟ : ಆರ್.ನಿಂಗಾನಾಯ್ಕ

 

ವರದಿ ಮತ್ತು ಫೋಟೋ ಕೃಪೆ                        ‌ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.03): ತಲ ತಲಾಂತರಗಳಿಂದಲೂ ಉಳುಮೆ ಮಾಡಿಕೊಂಡು ಬರುತ್ತಿರುವ ಸಾಗುವಳಿದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1956-57 ರಲ್ಲಿಯೇ ಕಂದಾಯ ಇಲಾಖೆ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಿದೆ. ಆದರೆ ಅರಣ್ಯ ಇಲಾಖೆ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಬಡ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವುದು ಯಾವ ನ್ಯಾಯ? ಸಾಗುವಳಿ ಮಾಡುತ್ತಿರುವ ಜಮೀನುಗಳಲ್ಲಿ ಗುಂಡಿ ತೆಗೆದು ಸುತ್ತ ಬೇಲಿ ಹಾಕುತ್ತಿದೆ.

ಇದರಿಂದ ಸಾಗುವಳಿಯನ್ನೇ ನಂಬಿಕೊಂಡು ಬದುಕುತ್ತಿರುವ ಭೂರಹಿತರು ಬೀದಿಗೆ ಬಿದ್ದಂತಾಗಿದೆ. ಬೇವಿನಹಳ್ಳಿ, ಎಮ್ಮಿನಗಟ್ಟ, ಭೀಮಸಮುದ್ರ, ತಣಿಗೆಹಳ್ಳಿ, ಡಿ.ಮದಕರಿಪುರ, ಹೊಳಲ್ಕೆರೆ ತಾಲ್ಲೂಕಿನ ಲಂಬಾಣಿಹಟ್ಟಿಯಲ್ಲಿ ರೈತರನ್ನು ಬಲವಂತವಾಗಿ ತೆರವುಗೊಳಿಸಲಾಗುತ್ತಿದೆ.

ಈ ಹಿಂದೆಯೇ ಅನೇಕ ಹೋರಾಟ ಪ್ರತಿಭಟನೆಗಳನ್ನು ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯವರ ಕಿರುಕುಳ ಇದೆ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಗಡುವು ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಬಗರ್‍ಹುಕುಂ ಫಲಾನುಭವಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಸಾಗುವಳಿ ಚೀಟಿಗಳನ್ನು ವಿತರಿಸಬೇಕು.

ಜಿಲ್ಲೆಯಲ್ಲಿ ಅರಣ್ಯ ಭೂಮಿಗಾಗಿ ಅರ್ಜಿ ಸಲ್ಲಿಸಿರುವ 17876 ರೈತರು 45850 ಎಕರೆ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದು, 1991-92, 1998-99, 2018-19 ನೇ ಸಾಲಿನಲ್ಲಿ ಸಾಗುವಳಿ ಸಕ್ರಮೀಕರಣಕ್ಕಾಗಿ ಸಲ್ಲಿಸಿದ ತಿರಸ್ಕøತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಸಾಗುವಳಿ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆರ್.ನಿಂಗಾನಾಯ್ಕ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಭೂರಹಿತ ರೈತರನ್ನು ಒಕ್ಕಲೆಬ್ಬಿಸಬಾರದೆಂಬ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಿರುಕುಳ ನೀಡುವುದು ನಿಲ್ಲಬೇಕು. ಜೀವನೋಪಾಯಕ್ಕಾಗಿ ಉಳುಮೆ ಮಾಡಿಕೊಂಡು ಬರುತ್ತಿರುವ ಬಡ ರೈತರನ್ನು ತೆರವುಗೊಳಿಸದರೆ ಅನ್ನಕ್ಕೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಧನಂಜಯ, ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಸಂಚಾಲಕ ನಾಗರಾಜನಾಯ್ಕ, ವೆಂಕಟೇಶ್‍ನಾಯ್ಕ, ಪಿ.ಎಸ್.ಜಯಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!