Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುಲಭ ತೆರಿಗೆ ವ್ಯವಸ್ಥೆಯಿಂದ ದೇಶದ ಪ್ರಗತಿ ಸಾಧ್ಯ : ಆದಾಯ ತೆರಿಗೆ ಅಧಿಕಾರಿ ರಾಮನಾಥನ್ ಹೇಳಿಕೆ

---Advertisement---

ಚಿತ್ರದುರ್ಗ. ಜೂನ್23: ದೇಶದ ಸರ್ವತೋಮುಖ ಪ್ರಗತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಭಾರತ ಸರ್ಕಾರವು ಸುಲಭ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಮೂಲಕ ತೆರಿಗೆ ಸುಧಾರಣೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ ಅಧಿಕಾರಿ ರಾಮನಾಥನ್ ಅಭಿಪ್ರಾಯಪಟ್ಟರು.

 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಹೊಸ ಆದಾಯ ತೆರಿಗೆ ಕಾಯ್ದೆ-2025′ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಭಾರತ ಸರ್ಕಾರವು ದೇಶದಲ್ಲಿ ‘ಸುಲಭ ವ್ಯಾಪಾರ ಮತ್ತು ಜೀವನ ನಿರ್ವಹಣೆ’ ಉತ್ತೇಜಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ತೆರಿಗೆ ಸುಧಾರಣೆಗಳನ್ನು ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಬಲಪಡಿಸಲು ಮತ್ತು 2047ರ ವೇಳೆಗೆ ಅಮೃತ ಕಾಲದ ಗುರಿ ತಲುಪಲು ಈ ತೆರಿಗೆ ವ್ಯವಸ್ಥೆಯು ಸಹಕಾರಿಯಾಗಲಿದೆ ಎಂದರು.

 

ಸುಮಾರು 60ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ‘ಆದಾಯ ತೆರಿಗೆ ಕಾಯ್ದೆ 1961’ರ ಅಡಿಯಲ್ಲಿ ಹಲವು ತಿದ್ದುಪಡಿಗಳು, ಕೋರ್ಟ್ ಪ್ರಕರಣಗಳು ಹಾಗೂ ಜಟಿಲ ನಿಯಮಗಳು ಸೃಷ್ಠಿಯಾಗಿದ್ದವು. ಇದರಿಂದಾಗಿ ತೆರಿಗೆದಾರರಲ್ಲಿ ಗೊಂದಲ ಹಾಗೂ ವ್ಯಾಜ್ಯಗಳು ಹೆಚ್ಚಾಗಿದ್ದವು. ಇವೆಲ್ಲವನ್ನೂ ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ಪ್ರಮುಖ ಉದ್ಯಮಿಗಳು, ತೆರಿಗೆದಾರರು ಹಾಗೂ ವಾಣಿಜ್ಯ ಸಂಘಟನೆಗಳ ಜೊತೆ ಸುದೀರ್ಘ ಚರ್ಚೆ ನಡೆಸಿ, ಅವರ ಸಲಹೆಗಳನ್ನು ಆಲಿಸಿದೆ. ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಮತ್ತು ಪಾರದರ್ಶಕವಾದ ಹೊಸ ಕಾಯ್ದೆ ಜಾರಿಗೆ ತರಲಾಗುತ್ತಿದ್ದು, ಇದು ಮುಂಬರುವ ಏಪ್ರಿಲ್ ತಿಂಗಳಿನಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.

 

ತೆರಿಗೆ ಇಲಾಖೆಯು ಸಾರ್ವಜನಿಕರೊಂದಿಗೆ ಅತ್ಯಂತ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಚ್ಛಿಸುತ್ತದೆ. ಸಾರ್ವಜನಿಕರು ಹಾಗೂ ತೆರಿಗೆದಾರರು ಯಾವುದೇ ಆತಂಕವಿಲ್ಲದೆ ತಮ್ಮ ಪ್ರಶ್ನೆಗಳು, ಗೊಂದಲಗಳು ಅಥವಾ ತಿದ್ದುಪಡಿಗಳ ಕುರಿತ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪ್ರತಿಯೊಂದು ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಿ, ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ದಾವಣಗೆರೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾಜ್ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ಜನರು ಹೆದರಬೇಕಾಗಿಲ್ಲ. ಫ್ಯಾಮಿಲಿ ಡಾಕ್ಟರ್ ನಮ್ಮ ಇಡೀ ಆರೋಗ್ಯದ ಇತಿಹಾಸ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುವಂತೆ, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಆರ್ಥಿಕ ಆರೋಗ್ಯ ಕಾಯುತ್ತದೆ ಹಾಗೂ ತಪ್ಪುಗಳಿದ್ದರೆ ಮುನ್ಸೂಚನೆ ನೀಡಿ ಸರಿಪಡಿಸಲು ನೆರವಾಗುತ್ತದೆ ಎಂದರು.

 

1961ರ ಆದಾಯ ತೆರಿಗೆ ಕಾಯ್ದೆಗೆ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ‘ಆದಾಯ ತೆರಿಗೆ ಕಾಯ್ದೆ-2025′ ಆಗಿ ರೂಪಿಸಲಾಗಿದೆ. ಕಾನೂನಿನ ಕಠಿಣ ಭಾಷೆಯನ್ನು ಸರಳಗೊಳಿಸುವುದು ಹಾಗೂ ತೆರಿಗೆದಾರ ಸ್ನೇಹಿಯಾಗಿಸುವುದು ಈ ಹೊಸ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ ಎಂದರು.

 

ಇದುವರೆಗೆ ಜಾರಿಯಲ್ಲಿದ್ದ ‘ಹಣಕಾಸು ವರ್ಷ’ ಮತ್ತು ‘ಮೌಲ್ಯಮಾಪನ ವರ್ಷ’ ಎಂಬ ಗೊಂದಲಕಾರಿ ಪದಗಳ ಕೈಬಿಡಲಾಗಿದ್ದು, ಅದರ ಬದಲಿಗೆ ಸರಳವಾಗಿ ‘ಟ್ಯಾಕ್ಸ್ ಇಯರ್’ ಎಂಬ ಒಂದೇ ಪರಿಕಲ್ಪನೆ ಜಾರಿಗೆ ತರಲಾಗಿದೆ. ಉದಾಹರಣೆಗೆ ಟ್ಯಾಕ್ಸ್ ಇಯರ್ 2026-27 ರಲ್ಲಿ ಮಾಡುವ ವ್ಯವಹಾರಗಳಿಗೆ ಅದೇ ವರ್ಷದಲ್ಲೇ ರಿಟರ್ನ್ಸ್ ಸಲ್ಲಿಸಬಹುದಾಗಿದ್ದು, ಸಾಮಾನ್ಯ ಜನರಿಗೂ ಇದು ಸುಲಭವಾಗಿ ಅರ್ಥವಾಗಲಿದೆ. ಹೊಸ ಕಾಯ್ದೆಯ ಸೆಕ್ಷನ್ 536(2) ರ ಪ್ರಕಾರ, ಹಳೆಯ ಕಾಯ್ದೆಯಡಿ ಬಾಕಿ ಇರುವ ಯಾವುದೇ ಅಸೆಸ್‌ಮೆಂಟ್‌ಗಳು, ಬೇಡಿಕೆಗಳು ಅಥವಾ ಅಪೀಲುಗಳು ಹಳೆಯ ಕಾಯ್ದೆಯ ನಿಯಮಗಳಡಿಯೇ ಮುಂದುವರಿಯಲಿವೆ. ಇದರಿಂದ ತೆರಿಗೆದಾರರಿಗೆ ಯಾವುದೇ ಹೊಸ ಕಾನೂನಿನ ಗೊಂದಲಗಳು ಎದುರಾಗುವುದಿಲ್ಲ ಎಂದರು.

 

ತೆರಿಗೆದಾರರು ಇನ್ಮುಂದೆ ತಮ್ಮ ರಿಟರ್ನ್ಸ್ ಸಲ್ಲಿಸುವಾಗ ಮನೆ ಹಾಗೂ ಕಚೇರಿ ಎರಡೂ ವಿಳಾಸಗಳನ್ನು ನೀಡಲು ಹೊಸ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ದೇಣಿಗೆ ನೀಡಿ ತೆರಿಗೆ ವಿನಾಯಿತಿ ಪಡೆಯಲು ಇನ್ಮುಂದೆ ಕಡ್ಡಾಯವಾಗಿ ಯುಪಿಐ, ಚೆಕ್ ಅಥವಾ ಆರ್‌ಟಿಜಿಎಸ್‌ನ ವಹಿವಾಟು ಉಲ್ಲೇಖ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ. ಇದರಿಂದ ನಕಲಿ ದೇಣಿಗೆ ಹಾವಳಿಗೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಆದಾಯ ತೆರಿಗೆ ಅಧಿಕಾರಿ ಆರ್.ಪಿ.ಕುಮಾರಸ್ವಾಮಿ, ಇನ್‌ಕಮ್ ಟ್ಯಾಕ್ಸ್ ಪ್ರಾಕ್ಟಿಸ್ ಅಸೋಸಿಯೇಷನ್‌ನ ತಿಪ್ಪೇಸ್ವಾಮಿ, ಚಾರ್ಟೆಡ್ ಅಕೌಂಟೆಡ್‌ಗಳಾದ ಮಧುಪ್ರಸಾದ್, ಕಾರ್ತೀಕ್, ಜಗನ್ನಾಥ್ ಸೇರಿದಂತೆ ತೆರಿಗೆದಾರರು, ಸಾರ್ವಜನಿಕರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now