ಬೇಸಿಗೆಯಿರಲಿ ಅಥವಾ ಮಳೆಗಾಲವಿರಲಿ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಜ್ಜಿಗೆ ಅತ್ಯುತ್ತಮವಾದ ಪಾನೀಯವಾಗಿದೆ. ಆದರೆ ನಾವು ನಿತ್ಯ ಕುಡಿಯುವ ಸಾಮಾನ್ಯ ಮಜ್ಜಿಗೆಗೆ ಕೇವಲ ಎರಡು ಪದಾರ್ಥಗಳನ್ನು ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುವುದಲ್ಲದೆ, ಆರೋಗ್ಯಕ್ಕೂ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮಜ್ಜಿಗೆಗೆ ಸ್ವಲ್ಪ ಜೀರಿಗೆ ಮತ್ತು ಶುಂಠಿಯನ್ನು ಬೆರೆಸಿ ಕುಡಿಯುವುದರಿಂದ ಅದ್ಭುತ ರುಚಿ ಸಿಗುತ್ತದೆ. ಜೀರಿಗೆಯು ಮಜ್ಜಿಗೆಗೆ ವಿಶೇಷವಾದ ಪರಿಮಳವನ್ನು ನೀಡಿದರೆ, ಶುಂಠಿಯು ಲಘು ಖಾರದ ರುಚಿಯನ್ನು ನೀಡುತ್ತದೆ.
ಜೀರ್ಣಕ್ರಿಯೆಗೆ ರಾಮಬಾಣ
ಊಟದ ನಂತರ ಈ ಮಜ್ಜಿಗೆಯನ್ನು ಸೇವಿಸುವುದರಿಂದ ತಿಂದ ಆಹಾರವು ಸುಲಭವಾಗಿ ಜೀರ್ಣವಾಗಿ, ಹೊಟ್ಟೆ ಹಗುರವಾದ ಅನುಭವ ನೀಡುತ್ತದೆ. ಅತಿಯಾದ ಅಥವಾ ಭಾರವಾದ ಆಹಾರ ತಿಂದ ನಂತರ ಹೊಟ್ಟೆ ಉಬ್ಬರ ತಡೆಯಲು ಮಜ್ಜಿಗೆಗೆ ಜೀರಿಗೆ, ಶುಂಠಿಯೊಂದಿಗೆ ಸ್ವಲ್ಪ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಕುಡಿಯುವುದು ಒಳ್ಳೆಯದು. ಮಜ್ಜಿಗೆಯಲ್ಲಿರುವ ‘ಪ್ರೋಬಯಾಟಿಕ್ಸ್’ ಅಂಶಗಳು ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ.
ಮಳೆಗಾಲದಲ್ಲಿ ಹೇಗೆ ಸೇವಿಸಬೇಕು?
ಸಾಮಾನ್ಯವಾಗಿ ಮಳೆಗಾಲದಲ್ಲಿ ತಂಪಾದ ಪದಾರ್ಥಗಳನ್ನು ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಳೆಗಾಲದಲ್ಲಿ ಈ ಮಜ್ಜಿಗೆಯನ್ನು ಲಘು ಉಗುರುಬೆಚ್ಚಗಿನ ರೂಪದಲ್ಲಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದನ್ನು ಮನೆಯಲ್ಲೇ ಅತ್ಯಂತ ಸುಲಭವಾಗಿ ತಯಾರಿಸಿಕೊಳ್ಳಬಹುದು.








