ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 15 : ನಗರದ ಡಿಡಿಪಿಐ ಕಚೇರಿಯಲ್ಲಿಯೇ ಎಣ್ಣೆ ಪಾರ್ಟಿಮಾಡಿರುವ ಘಟನೆ ನಡೆದಿದೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಡಿಪಿಐ ಕಚೇರಿಯಲ್ಲಿ ಈ ರೀತಿಯಾದ ಕೆಲಸ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಡಿಡಿಪಿಐ ಕಚೇರಿಯ ಸಿಬ್ಬಂದಿ ಹೊಸ ಕಾರನ್ನ ಖರೀದಿಸಿದ್ದಾರೆ. ಅದೇ ಖುಷಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಏನಾದರೂ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿದರೆ ಪಾರ್ಟಿ ಮಾಡುವ ಸಂಸ್ಕೃತಿ ಇತ್ತೀಚೆಗೆ ಜಾಸ್ತಿಯಾಗಿದೆ. ಆದರೆ ಆ ಪಾರ್ಟಿಯನ್ನು ಎಲ್ಲಿ ಮಾಡಬೇಕು ಎನ್ನುವ ವಿವೇಚನೆ ಇಲ್ಲದೇ ಹೋದರೆ ಹೇಗೆ ? ಅದು ಚಿತ್ರದುರ್ಗದ ಡಿಡಿಪಿಐ ಕಚೇರಿಯಲ್ಲಿನ ಸಿಬ್ಬಂದಿಗೆ ಪರಿಜ್ಞಾನವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಕಚೇರಿಯಲ್ಲಿಯೇ ಇದ್ದ 20 ಲೀಟರ್ ನೀರಿನ ಕ್ಯಾನ್ ಗೇ ನೇರವಾಗಿ ಎಣ್ಣೆಯನ್ನ ಮಿಕ್ಸ್ ಮಾಡಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಇಂಥದ್ದೊಂದು ನಡೆಯನ್ನ ಯಾರೂ ಸ್ವೀಕಾರ ಮಾಡುವುದಕ್ಕೆ ಸಾಧ್ಯವೇ ಇಲ್ಲ. ದೊಡ್ಡ ಕ್ಯಾನ್ ನಲ್ಲಿ ಮದ್ಯ ಬೆರೆಸಿ, ಕಾರು ಖರೀದಿಸಿದ ಖುಷಿಗೆ ಸಿಬ್ಬಂದಿ ಎಂಜಾಯ್ ಮಾಡಿದ್ದಾರೆ. ಅಲ್ಲಿದ್ದ ಉಳಿದ ಸಿಬ್ಬಂದಿ ಹಲವು ಬಗೆಯ ಸಂಭಾಷಣೆಯನ್ನ ನಡೆಸಿದ್ದಾರೆ. ಈ ಘಟನೆಯಿಂದ ಶಿಕ್ಷಣ ಇಲಾಖೆಗೆ ಅವಮಾನ ಮಾಡಿದಂತಾಗುತ್ತದೆ. ಮಕ್ಕಳ ಭವಿಷ್ಯವನ್ನ ಬರೆಯಬೇಕಾದವರು, ಕೆಟ್ಟದ್ದನ್ನ ಕಲಿಯಬೇಡಿ ಎಂದು ಹೇಳುವವರೇ ಇಂಥ ನೀಚ ಕೆಲಸ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಜನಾಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಶಿಕ್ಷಣ ಇಲಾಖೆಗೂ ತಲುಪಿರುತ್ತದೆ. ಮುಂದೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತೆ ಎಂಬುದನ್ನ ನೋಡಬೇಕಿದೆ. ಶಿಕ್ಷಣ ಇಲಾಖೆಯ ಒಳಗೆ ಮದ್ಯದ ಪಾರ್ಟಿ ಆಗಿದ್ದು ಖಂಡನೀಯ.





