ದೆಹಲಿ.ಸುದ್ದಿಒನ್.ಅಕ್ಟೋಬರ್.25: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣವನ್ನು ಅಕ್ಟೋಬರ್ 30 ರಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ರೈತರ ಖಾತೆಗೆ ಹಣ ಜಮೆಯಾಗಲಿರುವುದು ಅನ್ನದಾತರಿಗೆ ಸಂತಸ ತಂದಿದೆ. ಆದರೆ, ನಕಲಿ ಫಲಾನುಭವಿಗಳನ್ನು ತಡೆದು ಕೇವಲ ಅರ್ಹ ರೈತರಿಗೆ ಮಾತ್ರ ನೆರವು ತಲುಪಿಸಲು ಕೇಂದ್ರ ಸರ್ಕಾರ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಪ್ರಕ್ರಿಯೆ ಬಾಕಿ ಇದ್ದರೆ ಖಾತೆಗೆ ಹಣ ಜಮೆಯಾಗುವುದಿಲ್ಲ. ರೈತರು ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಇಲ್ಲವೇ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್ಸಿ (CSC) ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆಫ್ಲೈನ್ ಮೂಲಕವೂ ಬಯೋಮೆಟ್ರಿಕ್ ನೀಡಿ ಇದನ್ನು ಪೂರೈಸಬಹುದು.
ಆದರೆ, ಕೇವಲ ಇ-ಕೆವೈಸಿ ಮಾಡಿದರೆ ಸಾಲದು, ಹಣ ಜಮೆಯಾಗಲು ಈ ಕೆಳಗಿನ ಮೂರು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ NPCI ಮ್ಯಾಪಿಂಗ್
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಅದು NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಜೊತೆ ಮ್ಯಾಪಿಂಗ್ ಆಗಿರಬೇಕು (ಆಧಾರ್ ಸೀಡಿಂಗ್). ಈ ಪ್ರಕ್ರಿಯೆ ಅಪೂರ್ಣವಾಗಿದ್ದರೆ ಹಣ ಜಮೆಯಾಗುವುದಿಲ್ಲ. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಆನ್ಲೈನ್ ಮೂಲಕ ಈ ಸೀಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಭೂ ದಾಖಲೆಗಳ ಪರಿಶೀಲನೆ (Land Seeding)
ರೈತರ ಹೆಸರಿನಲ್ಲಿರುವ ಜಮೀನಿನ ವಿವರಗಳು ಸರಿಯಾಗಿ ದಾಖಲಾಗಿರಬೇಕು. ಇದಕ್ಕಾಗಿ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ‘ಬೆನಿಫಿಶಿಯರಿ ಸ್ಟೇಟಸ್’ (Beneficiary Status) ಪರಿಶೀಲಿಸಿ, ನಿಮ್ಮ ಜಮೀನಿನ ದಾಖಲೆಗಳು ಲಿಂಕ್ (ಸೀಡಿಂಗ್) ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏನಾದರೂ ತಪ್ಪುಗಳಿದ್ದರೆ ತಕ್ಷಣವೇ ಕಂದಾಯ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಿ.
ರೈತರ ನೋಂದಣಿ (Farmer Registry)
ರೈತರು ಸರ್ಕಾರದ ಅಧಿಕೃತ ಕೃಷಿ ಪೋರ್ಟಲ್ ಅಥವಾ ಫಾರ್ಮರ್ ರಿಜಿಸ್ಟ್ರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು.
ಈ ಎಲ್ಲಾ ನಿಯಮಗಳನ್ನು ಪಾಲಿಸಿ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ರೈತರಿಗೆ ಯಾವುದೇ ತಡೆ ಇಲ್ಲದೆ ಪಿಎಂ ಕಿಸಾನ್ ನೆರವು ಖಾತೆಗೆ ನೇರವಾಗಿ ಜಮೆಯಾಗಲಿದೆ. ಹಾಗಾಗಿ, ಬಾಕಿ ಇರುವ ಪ್ರಕ್ರಿಯೆಗಳನ್ನು ತಕ್ಷಣವೇ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.













