ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ “ಆರೋಗ್ಯಭರಿತ ಜೀವನಕ್ಕಾಗಿ ಪಾರಂಪರಿಕ ವೈದ್ಯ” ವಿಭಾಗೀಯ ಸಮಾವೇಶದಲ್ಲಿ, ಖ್ಯಾತ ಪಾರಂಪರಿಕ ವೈದ್ಯ ಕೆ. ವೀರಣ್ಣ ಅವರಿಗೆ ಗೌರವಾನ್ವಿತ ‘ಶರಣ ವೈದ್ಯ ಸಂಗಣ್ಣ ಪ್ರಶಸ್ತಿ-2026’ ನೀಡಿ ಗೌರವಿಸಲಾಯಿತು.
ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಹಾಗೂ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಜಂಟಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ವೈದ್ಯ ಕೆ. ವೀರಣ್ಣ ಅವರ ಸುದೀರ್ಘ ಹಾಗೂ ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಷ್ಟದ ಬಾಲ್ಯದಿಂದ ಸಮಾಜ ಸೇವೆಯತ್ತ :
1955ರ ಏಪ್ರಿಲ್ 25ರಂದು ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಬಂದಮೀರಪಳ್ಳಿಯಲ್ಲಿ ಜನಿಸಿದ ವೀರಣ್ಣನವರು, ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡರು. ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯಳನಾಡು ಗ್ರಾಮದಲ್ಲಿ ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದಾಗ ಪೂಜ್ಯ ರಾಘವೇಂದ್ರ ಗುರೂಜಿಯವರ ಪ್ರಭಾವಕ್ಕೆ ಒಳಗಾದ ಇವರು, ಅಲ್ಲಿ ನೀಡಲಾಗುತ್ತಿದ್ದ ನಾಟಿ ವೈದ್ಯ ಹಾಗೂ ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ಆಸಕ್ತಿಯಿಂದ ಕಲಿತು ಸ್ವಯಂ ವೈದ್ಯ ತರಬೇತಿ ಪಡೆದುಕೊಂಡರು.
ನಿವೃತ್ತಿಯ ನಂತರವೂ ನಿರಂತರ ಕಾಯಕ: ಸರ್ಕಾರಿ ಸೇವೆಯಲ್ಲಿದ್ದಾಗಲೂ ಗಿಡಮೂಲಿಕೆಗಳ ಬಳಕೆಯನ್ನು ಮುಂದುವರಿಸಿದ್ದ ವೀರಣ್ಣನವರು, ಉದ್ಯೋಗದಿಂದ ನಿವೃತ್ತರಾದ ಬಳಿಕ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಧುಮುಕಿದರು. ಕಳೆದ 20 ವರ್ಷಗಳಿಂದ ತಾಜಾ ಗಿಡಮೂಲಿಕೆಗಳ ಸ್ವರಸ ಹಾಗೂ ಕಷಾಯಗಳನ್ನು ಸಿದ್ಧಪಡಿಸಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಶೇಷವಾಗಿ ಗ್ಯಾಸ್ಟ್ರಿಕ್, ಮಧುಮೇಹ (ಶುಗರ್), ಮಲಬದ್ಧತೆ ಹಾಗೂ ರಕ್ತದೊತ್ತಡ (ಬಿಪಿ) ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ತಾಜಾ ಮೂಲಿಕಾ ಕಷಾಯಗಳ ಮೂಲಕ ಚಿಕಿತ್ಸೆ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿಗೆ ಭಾಜನರಾದ ವೈದ್ಯ ಕೆ. ವೀರಣ್ಣ ಅವರು ಪಾರಂಪರಿಕ ವೈದ್ಯ ಪರಿಷತ್ ಗೌರವಧ್ಯಕ್ಷರಾದ ಶ್ರೀ ಬಸವನಾಗಿದೇವ ಸ್ವಾಮೀಜಿ, ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ಕಾರ್ಯದರ್ಶಿ ಮೋಹಿಯುದ್ದೀನ್ ಖಾನ್ ಅವರನ್ನು ತುಂಬು ಹೃದಯದಿಂದ ಸ್ಮರಿಸಿದರು. ಇಳಿವಯಸ್ಸಿನಲ್ಲೂ ಸಮಾಜಕ್ಕೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ವೈದ್ಯ ಕೆ. ವೀರಣ್ಣ ಅವರ ಸೇವೆ ನಿರಂತರವಾಗಿ ದೊರೆಯಲಿ ಎಂದು ಪರಿಷತ್ತಿನ ಪದಾಧಿಕಾರಿಗಳು ಹಾಗೂ ಗಣ್ಯರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಸಿ. ಕಳಸದ (ನಿವೃತ್ತ ಐ.ಎ.ಎಸ್), ಪೂಜ್ಯ ಶ್ರೀ ಡಾ. ಬಸವಕುಮಾರ ಮಹಾಸ್ವಾಮಿಗಳು, ಡಾ. ಸತ್ಯನಾರಾಯಣ ಭಟ್, ಹಾಗೂ ಪರಿಷತ್ತಿನ ಅಧ್ಯಕ್ಷರಾದ ವೈದ್ಯ ಶ್ರೀ ಜಿ. ಮಹಾದೇವಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.











