ಸುದ್ದಿಒನ್, ಚಿತ್ರದುರ್ಗ, ಜುಲೈ. 01 : “ವೈದ್ಯೋ ನಾರಾಯಣ ಹರಿ” ಎಂಬ ನಂಬಿಕೆಯಂತೆ ಜನಸಮುದಾಯಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗೌರವಿಸಲು ಪ್ರತಿವರ್ಷ ಜುಲೈ 1 ರಂದು ಭಾರತದಾದ್ಯಂತ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯ ರಕ್ಷಿಸುವ, ರೋಗಿಗಳಿಗೆ ಮರುಜನ್ಮ ನೀಡುವ ಶ್ರೇಷ್ಠ ವೈದ್ಯರ ಸ್ಮರಣಾರ್ಥವಾಗಿ ಆಚರಿಸಲಾಗುವ ಈ ದಿನವು ರೋಗಿ ಮತ್ತು ವೈದ್ಯರ ನಡುವಿನ ಭಾವನಾತ್ಮಕ ಅನ್ಯೋನ್ಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ಜಗತ್ತಿನ ವಿವಿಧ ದೇಶಗಳಾದ ಆಸ್ಟ್ರೇಲಿಯಾ (ಮಾರ್ಚ್ 30), ಕುವೈತ್ (ಮಾರ್ಚ್ 3), ಬ್ರೆಜಿಲ್ (ಅಕ್ಟೋಬರ್ 18), ಕೆನಡಾ (ಮೇ 1), ಕ್ಯೂಬಾ (ಡಿಸೆಂಬರ್ 3), ಎಲ್ ಸಾಲ್ವಡಾರ್ (ಜುಲೈ 14), ಇಂಡೋನೇಷ್ಯಾ (ಅಕ್ಟೋಬರ್ 24) ಹಾಗೂ ಇರಾನ್ (ಆಗಸ್ಟ್ 23) ಸೇರಿದಂತೆ ಮಲೇಷ್ಯಾ, ಟರ್ಕಿ, ಯುಎಸ್ಎ, ವಿಯಟ್ನಾಂ, ವೆನೆಜುವೆಲಾ ಮತ್ತು ನೇಪಾಳದಲ್ಲಿ ವಿಭಿನ್ನ ದಿನಾಂಕಗಳಂದು ಇದನ್ನು ಆಚರಿಸಲಾಗುತ್ತದೆ. ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಮೊಟ್ಟಮೊದಲ ಬಾರಿಗೆ ಮಾರ್ಚ್ 28, 1933 ರಂದು ಯುಎಸ್ಎನ ಜಾರ್ಜಿಯಾದ ವಿಂಡರ್ನಲ್ಲಿ ಇದನ್ನು ಆಚರಿಸಲಾಯಿತು. ಕೆಲವು ದೇಶಗಳಲ್ಲಿ ವೈದ್ಯರು ಹಾಗೂ ಅವರ ಪತ್ನಿಯರಿಗೆ ಕಾರ್ಡ್ಗಳನ್ನು ಕಳುಹಿಸುವುದು ಮತ್ತು ಮೃತ ವೈದ್ಯರ ಸಮಾಧಿಗಳ ಮೇಲೆ ಹೂಗಳನ್ನಿಟ್ಟು ಸ್ಮರಿಸುವ ಸಂಪ್ರದಾಯವೂ ಇದೆ.
ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ಹೆಮ್ಮೆಯ ಹೆಜ್ಜೆಗುರುತುಗಳು :
ಐತಿಹಾಸಿಕ ಜಿಲ್ಲೆಯಾದ ಚಿತ್ರದುರ್ಗದಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ 150 ಎಮ್.ಬಿ.ಬಿ.ಎಸ್. ಸೀಟುಗಳ ಮಿತಿಯೊಂದಿಗೆ ಆರಂಭವಾದ CMCRI ಸಂಸ್ಥೆಯು, ಪ್ರಸಕ್ತ 2026-27ನೇ ಸಾಲಿಗೆ ಒಟ್ಟು 450 ವೈದ್ಯ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯದಲ್ಲೇ ಪ್ರಮುಖವಾಗಿ ಗುರುತಿಸಿಕೊಂಡಿರುವ ಈ ಕಾಲೇಜಿನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಾನ್ಯ ಡೀನ್ ಹಾಗೂ ನಿರ್ದೇಶಕರಾದ ಡಾ. ಬಿ.ಯುವಿ. ಯುವರಾಜ್ ಅವರ ಪಾತ್ರ ಚಾರಿತ್ರ್ಯಾರ್ಹವಾಗಿದೆ.
ಸಂಸ್ಥೆಯು ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಾಗಾರಗಳು ಹಾಗೂ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಇಲ್ಲಿದೆ :
ಸಮಗ್ರ-ತುರ್ತು ಆರೈಕೆ ಮತ್ತು ಜೀವನ ಬೆಂಬಲ (ಸಿ-ಇಸಿಎಲ್ಎಸ್) ತರಬೇತಿ: 06.04.2026 ರಿಂದ 11.04.2026 ರವರೆಗೆ RGUHS-ಜೀವರಕ್ಷಾ ಟ್ರಸ್ಟ್ ಮತ್ತು ಸ್ವಾಮಿ ವಿವೇಕಾನಂದ ಯುವ ಚಳುವಳಿಯ ಆಶ್ರಯದಲ್ಲಿ ಈ ತರಬೇತಿ ನಡೆಯಿತು. ಹಿರಿಯ ಬೋಧಕರಾದ ಡಾ. ವಿಜಯ ಭಾಸ್ಮರ್ ರೆಡ್ಡಿ, ಡಾ. ಗಣಶ್ರೀ ಸಿ.ಪಿ ಮತ್ತು ಡಾ. ನಳಿನಾ ಟಿ. ನೇತೃತ್ವ ವಹಿಸಿದ್ದರು. ಡಾ. ಬಿ.ವೈ. ಯುವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು ಸೂಕ್ಷ್ಮ-ಬೋಧನಾ ಅಧಿವೇಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಆಂಟಿ-ರ್ಯಾಗಿಂಗ್ ವಿರೋಧಿ ವೀಕ್ ಆಚರಣೆ: ದಿನಾಂಕ 12-08-2025 ರಿಂದ 18 ಆಗಸ್ಟ್ 2025 ರವರೆಗೆ ಪರಿಣಿತರ ಉಪನ್ಯಾಸಗಳೊಂದಿಗೆ ಈ ಜಾಗೃತಿ ವಾರವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಪಾಲ್ಗೊಂಡು ಸಹಾನುಭೂತಿ ಹಾಗೂ ಪರಸ್ಪರ ಗೌರವದ ಸಂದೇಶ ಸಾರಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ 2026: ಸಮುದಾಯ ಔಷಧ ವಿಭಾಗವು ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಫೆಬ್ರವರಿ 10 ರಿಂದ 16, 2026 ರವರೆಗೆ ಈ ಕಾರ್ಯಕ್ರಮ ಆಯೋಜಿಸಿತ್ತು. ಆಲ್ಬೆಂಡಜೋಲ್ ಮಾತ್ರೆಗಳ ವಿತರಣೆ ಹಾಗೂ UHTC-UPHC ಸಿಬ್ಬಂದಿಯ ಸಮನ್ವಯದೊಂದಿಗೆ ರಕ್ತಹೀನತೆ, ಅಪೌಷ್ಟಿಕತೆ ತಡೆಗಟ್ಟುವ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಯಿತು.
ವಿಶ್ವ ಕ್ಷಯರೋಗ ದಿನ 2026: ಮಾರ್ಚ್ 2026 ರಲ್ಲಿ “ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು: ಬದ್ಧರಾಗಿರಿ, ಹೂಡಿಕೆ ಮಾಡಿ, ತಲುಪಿಸಿ” ಎಂಬ ಥೀಮ್ನಡಿ ಹಂತ III MBBS ವಿದ್ಯಾರ್ಥಿಗಳಿಗೆ ಸೆಮಿನಾರ್ ಆಯೋಜಿಸಲಾಗಿತ್ತು. ಇದರಲ್ಲಿ ರೋಗನಿರ್ಣಯ, CBNAAT, ಚಿಕಿತ್ಸಾ ಪ್ರೋಟೋಕಾಲ್ ಹಾಗೂ ‘ನಿಕ್ಷಯ್’ ಪೋರ್ಟಲ್ ಬಳಕೆಯ ಬಗ್ಗೆ ತರಬೇತಿ ನೀಡಲಾಯಿತು.
ಭವ್ಯ ‘ವೈಟ್ ಕೋಟ್’ ಸಮಾರಂಭ: 2025–26ನೇ ಸಾಲಿನ ಹೊಸ MBBS ಬ್ಯಾಚ್ ವಿದ್ಯಾರ್ಥಿಗಳಿಗೆ 31 ಅಕ್ಟೋಬರ್ 2025 ರಂದು ವೈಟ್ ಕೋಟ್ ಧರಿಸುವ ಹಾಗೂ ಮಹರ್ಷಿ ಚರಕ್ ಶಪಥ ಸ್ವೀಕರಿಸುವ ಸಮಾರಂಭ ನಡೆಯಿತು. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಮೊಹ್ಸಿನ್ (IAS), ಹಣಕಾಸು ಸುಧಾರಣಾ ಕಾರ್ಯದರ್ಶಿ ಡಾ. ವಿಶಾಲ್ ಆರ್. (IAS) ಮತ್ತು ಜಿಲ್ಲಾ ಪಂಚಾಯತ್ ಸಿಇಒ ಡಾ. ಆಕಾಶ್ ಎಸ್. (IAS) ಮುಖ್ಯ ಅತಿಥಿಗಳಾಗಿದ್ದರು. ಡಾ. ಮೇಘಾ ಜಿ.ಹೆಚ್. ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದರು.
ಆರೋಗ್ಯ ವಿಜ್ಞಾನದಲ್ಲಿ ಸಂಶೋಧನಾ ಕಾರ್ಯಾಗಾರ: ದಿನಾಂಕ 08-06-2026 ಮತ್ತು 09-06-2026 ರಂದು ಪದವಿ ವಿದ್ಯಾರ್ಥಿಗಳಿಗಾಗಿ ನಡೆದ ಕಾರ್ಯಾಗಾರವನ್ನು ಡಾ. ಬಿ.ವೈ. ಯುವರಾಜ್ ಉದ್ಘಾಟಿಸಿದರು. ಮೆಡಿಕಲ್ ಸೂಪರಿಂಟೆಂಡೆಂಟ್ (ಪ್ರಭಾರ) ಡಾ. ಮೇಘಾ ಜಿ.ಹೆಚ್. ಸ್ವಾಗತಿಸಿದರು. ಡಾ. ನಾಗೇಶ್ ಎಲ್., ಡಾ. ಪೂಜಾ ಯಾವಗಲ್ ಹಾಗೂ ಡಾ. ಗಣಾಚಾರಿ ಎಂ.ಎಸ್. ಅವರುಗಳು ಸಂಶೋಧನಾ ವಿನ್ಯಾಸ, ಸಾಂಖ್ಯಿಕ ವಿಶ್ಲೇಷಣೆ ಹಾಗೂ ಸಂಶೋಧನೆಯಲ್ಲಿ AI ಮತ್ತು ಪ್ಲೇಜಿಯರಿಸಂ ಪಾತ್ರದ ಕುರಿತು ವಿಶೇಷ ಸಂವಾದ ನಡೆಸಿಕೊಟ್ಟರು. ಇಎನ್ಟಿ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಮರಡಿ ಕಾರ್ಯಕ್ರಮ ಆಯೋಜಿಸಿದ್ದರು.
ಸಿಎಮ್ಇ ಆನ್ “ಡಿಜಿಟಲ್ ಜನಸಂಖ್ಯಾಶಾಸ್ತ್ರ”: ಸಮುದಾಯ ವೈದ್ಯಕೀಯ ವಿಭಾಗವು ಜೂನ್ 6, 2026 ರಂದು ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಗಂಗೋತ್ರಿಯ ಉಪನ್ಯಾಸ ಸಭಾಂಗಣದಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಜನಗಣತಿ ಹಾಗೂ ಕೃತಕ ಬುದ್ಧಿಮತ್ತೆ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮ ಹಮ್ಮಿಕೊಂಡಿತ್ತು. ಡಾ. ಅಶ್ವಿನಿ ಎಲ್.ಎಚ್. ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಮುರುಘಾ ಮಠದ ಎಸ್ಜೆಎಂ ವಿದ್ಯಾಪೀಠದ ಆಡಳಿತ ಸಮಿತಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಡಾ. ರಾಜೇಶ್ ಎಂ.ಎಸ್. ಮತ್ತು ಡಾ. ಹೇಮಗಿರಿ ಕೆ. ಭಾಗವಹಿಸಿದ್ದರು.
ಹೃದಯ ಆರೋಗ್ಯ ತಪಾಸಣಾ ಶಿಬಿರ: ದಿನಾಂಕ 12-08-2026 ರಂದು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬೃಹತ್ ಶಿಬಿರವನ್ನು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ರೋಣಾ ವಾಸುದೇವರಾವ್ ಉದ್ಘಾಟಿಸಿದರು. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಎಸ್. ರವೀಂದ್ರನಾಥ್ ಮುಖ್ಯ ಅತಿಥಿಗಳಾಗಿದ್ದರು. ಡಾ. ಬಿ.ವೈ. ಯುವರಾಜ್ ಹಾಗೂ ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮೇಘಾ ಜಿ.ಹೆಚ್. ಆಯೋಜಿಸಿದ್ದ ಈ ಶಿಬಿರದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ ಮಾಡಲಾಯಿತು.
ಕನ್ನಡ ಅಭಿವೃದ್ಧಿ ಅನುಷ್ಠಾನ ಕಾರ್ಯಕ್ರಮ: ಸಂಸ್ಥೆಯಲ್ಲಿ ಕನ್ನಡದ ಅರಿವು ಮೂಡಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ನಿರ್ದೇಶಕರಾದ ಡಾ. ಬಿ.ವೈ. ಯುವರಾಜ್ ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



































