ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿಬಿಸಿ ಚಹಾ ಅಥವಾ ಕಾಫಿ ಕುಡಿಯದಿದ್ದರೆ ಕೆಲವರಿಗೆ ದಿನವೇ ಆರಂಭವಾದಂತೆ ಅನಿಸುವುದಿಲ್ಲ. ಇನ್ನೂ ಕೆಲವರು ಪಾನೀಯ ಸ್ವಲ್ಪ ತಣ್ಣಗಾದರೂ ಕುಡಿಯಲು ಇಷ್ಟಪಡುವುದಿಲ್ಲ. ಕುದಿಸಿದ ತಕ್ಷಣವೇ ಬಿಸಿಬಿಸಿಯಾಗಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇಂತಹ ಅಭ್ಯಾಸ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.ಪ್ರತಿದಿನ ಅತಿಯಾದ ಬಿಸಿ ಪಾನೀಯಗಳನ್ನು ಕುಡಿಯುವುದರಿಂದ ಆಹಾರ ನಾಳದ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಆಹಾರ ನಾಳದ ಕ್ಯಾನ್ಸರ್ ಅಪಾಯವೂ ಹೆಚ್ಚಬಹುದು ಎಂದು ಸಂಶೋಧನೆಗಳು ಸೂಚಿಸಿವೆ. ಹಾಗಾದರೆ ಚಹಾ ಅಥವಾ ಕಾಫಿ ಕುಡಿಯುವುದರಿಂದಲೇ ಕ್ಯಾನ್ಸರ್ ಬರುತ್ತದೆಯೇ? ಅಥವಾ ಅವುಗಳ ಅತಿಯಾದ ಉಷ್ಣತೆಯೇ ಅಪಾಯಕ್ಕೆ ಕಾರಣವೇ? ಈ ಕುರಿತು ಚೆನ್ನೈನ ಗ್ಲೆನೀಗಲ್ಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ. ಅರುಣ್ ರಮಣನ್ ವಿ. ಮಹತ್ವದ ಮಾಹಿತಿ ನೀಡಿದ್ದಾರೆ.
ಅತಿಯಾದ ಬಿಸಿ ಚಹಾ, ಕಾಫಿ ಆಹಾರ ನಾಳಕ್ಕೆ ಹೇಗೆ ಹಾನಿ ಮಾಡುತ್ತವೆ?
ನಾವು ಕುಡಿಯುವ ಚಹಾ ಅಥವಾ ಕಾಫಿ ಬಾಯಿಯಿಂದ ಆಹಾರ ನಾಳದ ಮೂಲಕ ಹೊಟ್ಟೆ ಸೇರುತ್ತದೆ. ಆಹಾರ ನಾಳದ ಒಳಭಾಗದಲ್ಲಿ ಮ್ಯೂಕೋಸಲ್ ಲೈನಿಂಗ್ ಎಂಬ ರಕ್ಷಣಾತ್ಮಕ ಕೋಶಗಳ ಪದರವಿದ್ದು, ಇದು ಒಳಭಾಗವನ್ನು ಹಾನಿಯಿಂದ ರಕ್ಷಿಸುತ್ತದೆ.ಆದರೆ ಪ್ರತಿದಿನ ಅತಿಯಾದ ಬಿಸಿ ಪಾನೀಯಗಳನ್ನು ಕುಡಿಯುವುದರಿಂದ ಈ ಸೂಕ್ಷ್ಮ ಪದರಕ್ಕೆ ಹಾನಿಯಾಗಬಹುದು. ದೇಹವು ಸಾಮಾನ್ಯವಾಗಿ ಹಾನಿಗೊಳಗಾದ ಕೋಶಗಳನ್ನು ದುರಸ್ತಿಗೊಳಿಸುವ ಸಾಮರ್ಥ್ಯ ಹೊಂದಿದೆ. ಆದರೆ ಪದೇಪದೆ ಅತಿಯಾದ ಉಷ್ಣತೆಗೆ ಆಹಾರ ನಾಳ ಒಡ್ಡಿಕೊಂಡರೆ ಗಾಯ ಮತ್ತು ಉರಿಯೂತ ಉಂಟಾಗುವ ಸಾಧ್ಯತೆಯಿದೆ.
ಇಂತಹ ಹಾನಿ ನಿರಂತರವಾಗಿ ಮುಂದುವರಿದರೆ ಕೋಶಗಳ ಬೆಳವಣಿಗೆಯಲ್ಲಿ ಅಸಹಜ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಲು ಕಾರಣವಾಗಬಹುದು ಎಂದು ವೈದ್ಯರು ವಿವರಿಸಿದ್ದಾರೆ.
65 ಡಿಗ್ರಿ ಸೆಲ್ಸಿಯಸ್ಗಿಂತ ಬಿಸಿ ಪಾನೀಯಗಳ ಸೇವನೆ ಅಪಾಯವೇ?
ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಕೂಡ ಅತಿಯಾದ ಬಿಸಿ ಪಾನೀಯಗಳ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ.65 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಪಾನೀಯಗಳನ್ನು ಸೇವಿಸುವುದನ್ನು ಆಹಾರ ನಾಳದ ಕ್ಯಾನ್ಸರ್ಗೆ ಸಂಬಂಧಿಸಿದ ಸಂಭವನೀಯ ಅಪಾಯಕಾರಿ ಅಂಶವೆಂದು ವರ್ಗೀಕರಿಸಲಾಗಿದೆ. ವಿಶೇಷವಾಗಿ ಆಹಾರ ನಾಳದ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂಬ ಕ್ಯಾನ್ಸರ್ ಪ್ರಕಾರದೊಂದಿಗೆ ಅತಿಯಾದ ಬಿಸಿ ಪಾನೀಯಗಳ ಸೇವನೆಗೆ ಸಂಬಂಧವಿರಬಹುದು ಎಂದು ಸಂಶೋಧನೆಗಳು ಸೂಚಿಸಿವೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಚಹಾ ಅಥವಾ ಕಾಫಿಯಲ್ಲಿರುವ ಅಂಶಗಳಿಗಿಂತ ಅವುಗಳನ್ನು ಕುಡಿಯುವಾಗ ಇರುವ ಅತಿಯಾದ ಉಷ್ಣತೆಯೇ ಮುಖ್ಯ ಸಮಸ್ಯೆಯಾಗಿದೆ. ಆದರೆ ಬಿಸಿಯಾದ ಚಹಾ ಅಥವಾ ಕಾಫಿ ಕುಡಿಯುವ ಪ್ರತಿಯೊಬ್ಬರಿಗೂ ಕ್ಯಾನ್ಸರ್ ಬರುತ್ತದೆ ಎಂದರ್ಥವಲ್ಲ.
ಈ ಅಭ್ಯಾಸಗಳಿದ್ದರೆ ಕ್ಯಾನ್ಸರ್ ಅಪಾಯ ಹೆಚ್ಚಬಹುದು!
ಅತಿಯಾದ ಬಿಸಿ ಪಾನೀಯಗಳ ಸೇವನೆ ಮಾತ್ರ ಆಹಾರ ನಾಳದ ಕ್ಯಾನ್ಸರ್ಗೆ ಕಾರಣವಲ್ಲ. ಕೆಲವು ಜೀವನಶೈಲಿ ಅಭ್ಯಾಸಗಳು ಮತ್ತು ಆರೋಗ್ಯ ಸಮಸ್ಯೆಗಳೂ ಅಪಾಯವನ್ನು ಹೆಚ್ಚಿಸಬಹುದು. ಅವುಗಳಲ್ಲಿ ಧೂಮಪಾನ, ತಂಬಾಕು ಸೇವನೆ, ಮದ್ಯಪಾನ, ದೀರ್ಘಕಾಲದ ಆಸಿಡ್ ರಿಫ್ಲಕ್ಸ್ ಸಮಸ್ಯೆ, ವಯಸ್ಸು ಹೆಚ್ಚಾಗುವುದು ಹಾಗೂ ಆಹಾರ ನಾಳಕ್ಕೆ ಸಂಬಂಧಿಸಿದ ಕೆಲವು ದೀರ್ಘಕಾಲದ ಕಾಯಿಲೆಗಳು ಪ್ರಮುಖವಾಗಿವೆ.ಈ ಅಪಾಯಕಾರಿ ಅಂಶಗಳಿರುವ ಪ್ರತಿಯೊಬ್ಬರಿಗೂ ಕ್ಯಾನ್ಸರ್ ಬರುತ್ತದೆ ಎಂದಲ್ಲ. ಆದರೆ ಇಂತಹ ಅಭ್ಯಾಸಗಳನ್ನು ನಿಯಂತ್ರಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ.
ಚಹಾ ಅಥವಾ ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಆದರೆ ಕುಡಿಯುವ ವಿಧಾನದಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ.
ಕುದಿಸಿದ ತಕ್ಷಣ ಕುಡಿಯಬೇಡಿ: ಚಹಾ ಅಥವಾ ಕಾಫಿ ತಯಾರಿಸಿದ ಬಳಿಕ ಸ್ವಲ್ಪ ಸಮಯ ತಣ್ಣಗಾಗಲು ಬಿಡಿ.
ಬಾಯಿ ಸುಡುವಷ್ಟು ಬಿಸಿ ಬೇಡ: ಆರಾಮವಾಗಿ ಕುಡಿಯಲು ಸಾಧ್ಯವಾಗುವ ಉಷ್ಣತೆಯಲ್ಲಿದ್ದಾಗ ಮಾತ್ರ ಸೇವಿಸಿ.
ಉಷ್ಣತೆಯ ಬಗ್ಗೆ ಗಮನವಿರಲಿ: ದಿನಕ್ಕೆ ಒಂದು ಅಥವಾ ಎರಡು ಕಪ್ ಕುಡಿದರೂ ಅತಿಯಾದ ಬಿಸಿಯಾಗಿರದಂತೆ ನೋಡಿಕೊಳ್ಳಿ.
ತಂಬಾಕಿನಿಂದ ದೂರವಿರಿ: ಧೂಮಪಾನ ಮತ್ತು ತಂಬಾಕು ಸೇವನೆಯ ಅಭ್ಯಾಸವನ್ನು ತ್ಯಜಿಸಿ.
ಮದ್ಯಪಾನ ನಿಯಂತ್ರಿಸಿ: ಮದ್ಯಪಾನದಿಂದ ದೂರವಿರುವುದು ಅಥವಾ ಅದರ ಸೇವನೆಯನ್ನು ನಿಲ್ಲಿಸುವುದು ಆರೋಗ್ಯಕ್ಕೆ ಉತ್ತಮ.
ಆಹಾರ ನಾಳದ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಕೆಲವು ಲಕ್ಷಣಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಅದರಲ್ಲೂ ಆಹಾರ ನುಂಗಲು ತೊಂದರೆಯಾಗುವುದು ಪ್ರಮುಖ ಎಚ್ಚರಿಕೆಯ ಸಂಕೇತವಾಗಿದೆ. ಆರಂಭದಲ್ಲಿ ಗಟ್ಟಿಯಾದ ಆಹಾರ ನುಂಗಲು ಕಷ್ಟವಾಗಬಹುದು. ನಂತರ ನೀರು ಅಥವಾ ಇತರ ದ್ರವ ಪದಾರ್ಥಗಳನ್ನು ನುಂಗುವುದಕ್ಕೂ ತೊಂದರೆಯಾಗಬಹುದು.ಇದರ ಜೊತೆಗೆ ಯಾವುದೇ ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುವುದು, ಎದೆಯ ಮೂಳೆಯ ಹಿಂಭಾಗದಲ್ಲಿ ನಿರಂತರ ನೋವು, ಪದೇಪದೆ ವಾಂತಿಯಾಗುವುದು, ವಾಂತಿಯಲ್ಲಿ ರಕ್ತ ಕಾಣಿಸಿಕೊಳ್ಳುವುದು ಹಾಗೂ ಆಹಾರ ಅಥವಾ ನೀರು ನುಂಗಲು ತೊಂದರೆಯಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
ಈ ಲಕ್ಷಣಗಳು ಕಂಡುಬಂದರೆ ಕ್ಯಾನ್ಸರ್ ಇದೆ ಎಂದೇ ಅರ್ಥವಲ್ಲ. ಇತರ ಆರೋಗ್ಯ ಸಮಸ್ಯೆಗಳೂ ಇಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಅಗತ್ಯವಿದ್ದರೆ ವೈದ್ಯರು ಎಂಡೋಸ್ಕೋಪಿ ಪರೀಕ್ಷೆ ನಡೆಸಿ, ಅನುಮಾನವಿದ್ದಲ್ಲಿ ಬಯಾಪ್ಸಿ ಮೂಲಕ ಅಂಗಾಂಶದ ಮಾದರಿಯನ್ನು ಪರೀಕ್ಷಿಸಬಹುದು.
ಚಹಾ, ಕಾಫಿ ಕುಡಿಯುವುದನ್ನು ಸಂಪೂರ್ಣ ನಿಲ್ಲಿಸಬೇಕೇ?
ಖಂಡಿತವಾಗಿಯೂ ಇಲ್ಲ. ಚಹಾ ಅಥವಾ ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಆದರೆ ಕುದಿಸಿದ ತಕ್ಷಣವೇ ಬಿಸಿಬಿಸಿಯಾಗಿ ಕುಡಿಯುವ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು. ಪಾನೀಯ ಸ್ವಲ್ಪ ತಣ್ಣಗಾಗುವವರೆಗೆ ಕಾಯುವುದು ಉತ್ತಮ.
ಬೆಳಗಿನ ದಿನಚರಿಯಲ್ಲಿ ಈ ಸಣ್ಣ ಬದಲಾವಣೆ ಮಾಡಿಕೊಳ್ಳುವುದರಿಂದ ಆಹಾರ ನಾಳವನ್ನು ಅತಿಯಾದ ಉಷ್ಣತೆಯಿಂದ ರಕ್ಷಿಸಿಕೊಳ್ಳಲು ಸಹಾಯವಾಗಬಹುದು. ತಂಬಾಕು ಮತ್ತು ಧೂಮಪಾನದಿಂದ ದೂರವಿದ್ದು, ಮದ್ಯಪಾನವನ್ನು ತ್ಯಜಿಸುವುದರ ಜೊತೆಗೆ ಆಹಾರ ನುಂಗಲು ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.











