ರಾಮನಗರ; ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಹಕ್ಕಿಪಿಕ್ಕಿ ಕಾಲೋನಿಯ ವಿಕಲಚೇತನ ಬಾಲಕಿ 14 ವರ್ಷದ ಖುಷಿ ಕಳೆದ ಭಾನುವಾರ ನಾಪತ್ತೆಯಾಗಿದ್ದರು. ಅವರ ಪೋಷಕರು ದೂರನ್ನು ನೀಡಿದ್ದರು. ಸೋಮವಾರ ರೈಲ್ವೆ ಹಳಿಯ ಪಕ್ಕದಲ್ಲಿ ಹೆಣವಾಗಿ ಪತ್ತೆಯಾಗಿದ್ದರು. ಘಟನೆ ಸಂಬಂಧ ಈಗಾಗಲೇ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮದಿಂದಾನು ತನಿಖೆ ನಡೆಸುತ್ತಿದ್ದಾರೆ. ಸಂಜೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮೃತ ಬಾಲಕಿಯ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ್ದಾರೆ. ಪರಿಹಾರವಾಗಿ ಹಣವನ್ನು ನೀಡಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಗ್ರಾಮದಲ್ಲಿ ಹೆಣ್ಣು ಮಗು ರೈಲ್ವೆ ಟ್ರ್ಯಾಕ್ ನಲ್ಲಿ ಬಿದ್ದದ್ದು ಗೊತ್ತಾಗಿದೆ. ಬಹಳ ಅನುಮಾನಾಸ್ಪದವಾದಂತ ಕೊಲೆ ಕೇಸೆಂದು ನಮ್ಮ ಪೊಲೀಸರು ಕೇಸ್ ಬುಕ್ ಮಾಡಿಕೊಂಡಿದ್ದಾರೆ. ನಾನು ಊರಿನವರನ್ನು ಕೇಳಿದೆ ಯಾರ ಮೇಲೂ ಅನುಮಾನ ಇಲ್ಲ ಅಂತ ಇದ್ದಾರೆ. ಆದರೆ ನಾವೂ ತನಿಖೆಯನ್ನ ಮಾಡಲೇಬೇಕಾಗಿದೆ. ಈಗಾಗಲೇ ತನಿಖೆ ಶುರುವಾಗಿದೆ. ಆ ಹೆಣ್ಣುಮಗು ರಜೆಗೆ ಬಂದಿದ್ದರು ಎಂಬುದು ಗೊತ್ತಾಗಿದೆ.
ಕಿವಿ ಕೇಳಿಸ್ತಾ ಇರಲಿಲ್ಲ, ಮಾತಾಡ್ತಾ ಇರಲಿಲ್ಲ ಎಂಬ ಮಾಹಿತಿ ಇದೆ. ಅವರಿಗೆ ನ್ಯಾಯ ಕೊಡಿಸಬೇಕಾದಂತದ್ದು ನಮ್ಮ ಕರ್ತವ್ಯ. ಪೊಲೀಸರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನ ಕೊಟ್ಟಿದ್ದೇವೆ. ಅವರು ಸರಿಯಾದ ರೀತಿಯ ತನಿಖೆ ನಡೆಸಲಿ. ಆ ಹೆಣ್ಣು ಮಗು ತಾಯಿಗೆ ನೇರವಾಗಿ ಪರಿಹಾರ ಕೊಡುತ್ತೇವೆ. ಅವರ ಅಕೌಂಟ್ ಗೆ ನೇರವಾಗಿ ಪರಿಹಾರ ಹೋಗುತ್ತೆ. ಇದು ಏನಾಗಿದೆ ಪರಿಸ್ಥಿತಿ ಎಂಬುದನ್ನು ನೋಡುವುದಕ್ಕೆ ಹೇಳಿದ್ದೀವಿ. ಎಲ್ಲಾ ಆಯಾಮದಿಂದಾನು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.


