ಬೆಂಗಳೂರು : ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಸಂಜೆ 6 ಗಂಟೆಯ ನಂತರ ಸಂಪೂರ್ಣ ಮಾಹಿತಿಯನ್ನ ಸಚಿವ ಮಧು ಬಂಗಾರಪ್ಪ ಅವರು ನೀಡುತ್ತಾರೆ. ಸದ್ಯ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿಯೂ ಲಭ್ಯವಾಗಿದೆ. ದಿಶಾ ಎಂಬ ವಿದ್ಯಾರ್ಥಿನಿ 600 ಅಂಕ ಪಡೆದು, ಪ್ರಥಮ ಸ್ಥಾನದಲ್ಲಿ ನಿಂತಿದ್ದಾರೆ.
ದಿಶಾ, ದಕ್ಷಿಣ ಕನ್ನಡದ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಾ ಇದ್ದರು. ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ದಿಶಾ, ಎಲ್ಲಾ ವಿಷಯದಲ್ಲೂ 100ಕ್ಕೆ 100 ಅಂಕಗಳನ್ನ ಗಳಿಸಿದ್ದಾರೆ. ಇದು ಇಡೀ ಕಾಲೇಜಿಗೆ ಸಂಭ್ರಮಿಸುವಂತ ಸಂದರ್ಭವನ್ನ ಸೃಷ್ಟಿ ಮಾಡಿದೆ. ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಬಂದಾಗೆಲ್ಲಾ ಎಲ್ಲರ ಗಮನ ದಕ್ಷಿಣ ಕನ್ನಡದತ್ತಲೇ ಹೋಗುತ್ತದೆ. ಯಾಕಂದ್ರೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಇರುವ ಈ ಜಿಲ್ಲೆಯ ಫಲಿತಾಂಶ ಯಾವಾಗಲೂ ಪ್ರಥಮ ಸ್ಥಾನದಲ್ಲಿಯೇ ಇರಲಿದೆ.
ಇನ್ನು ಯಾರೆಲ್ಲಾ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ, ಕಲಾ ವಿಭಾಗದಲ್ಲಿ ಫಲಿತಾಂಶ ಏನಾಗಿದೆ, ಯಾವ ಮಾಧ್ಯಮದಲ್ಲಿ ಎಷ್ಟೆಷ್ಟು ಫಲಿತಾಂಶ, ಸರ್ಕಾರಿ ಶಾಲೆಯ ಫಲಿತಾಂಶ ಏನಾಗಿದೆ, ಜಿಲ್ಲಾವಾರು, ವಿಷಯವಾರು ಹೀಗೆ ಸಂಪೂರ್ಣವಾದ ಮಾಹಿತಿ ಸಂಜೆ ವೇಳೆಗೆ ಸಿಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ತಿಳಿಸಲಿದ್ದಾರೆ. ಈಗ ವಿದ್ಯಾರ್ಥಿಗಳು ಇಲಾಖೆಯ ವೆಬ್ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ತಿಳಿಯಬಹುದಾಗಿದೆ. ಜೊತೆಗೆ ಮಕ್ಕಳ ರಿಜಿಸ್ಟರ್ ನಂಬರ್ ಗೆ ಫಲಿತಾಂಶದ ವರದಿ ಬಂದಿರುತ್ತದೆ. ಸದ್ಯ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ದಿಶಾಗೆ ಶುಭಾಶಯಗಳ ಸುರಿಮಳೆ ಸಿಗ್ತಾ ಇದೆ.












