ವಿಶೇಷ ಲೇಖನ :
ಡಾ ಕೆ ವಿ ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ
ಮೊ : 93424 66936

ಸುದ್ದಿಒನ್
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು 2 ಹೋಬಳಿಯ ಹಿರೇಉಡ ಗ್ರಾಮದಲ್ಲಿರುವ ತುಳಜಾಭವಾನಿ ದೇವಸ್ಥಾನ. ಇಲ್ಲಿಗೆ ಚನ್ನಗಿರಿ-ದೇವರಹಳ್ಳಿ-ಹಿರೇಉಡ ರಸ್ತೆಯಲ್ಲಿ ತಲುಪಬಹುದು. ಈ ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು,ಗರ್ಭಗೃಹ ಹಾಗೂ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿರುವ ತುಳಜಾಭವಾನಿ ಶಿಲ್ಪವು 300 ವರ್ಷಗಳಷ್ಟು ಹಳೆಯದಾಗಿದ್ದು,ಬಲಭಾಗದಲ್ಲಿ ಶಿವಲಿಂಗವಿದೆ.
ಮುಂದಿನ ಭಾಗದ ದೇವಸ್ಥಾನವು ಇಪ್ಪತ್ತನೇ ಶತಮಾನದ ಆದಿಯಲ್ಲಿ ನಿರ್ಮಿಸಲಾಗಿದ್ದು 120 ರಿಂದ 150 ವರ್ಷದಷ್ಟು ಹಳೆಯದಾಗಿದೆ. 1663 ರಲ್ಲಿ ಶಿವಾಜಿಯ ತಂದೆ ಶಹಜಿ ಇಲ್ಲಿಗೆ ಆಗಮಿಸಿದ ಬಗ್ಗೆ, ಶಿವಾಜಿ, ಜೀಜಾಬಾಯಿ ಕೂಡಾ ಆಗಮಿಸಿ ದೇವಿಯ ದರ್ಶನ ಪಡೆದ ಇಲ್ಲಿನ ಗೋಡೆಬರಹ ತಿಳಿಸುತ್ತದೆ.
ಗರ್ಭಗೃಹದಲ್ಲಿ 3 ಅಡಿ ಎತ್ತರದ ತುಳಜಾಭವಾನಿ ದೇವಿಯ ಶಿಲ್ಪವಿದ್ದು ಮಹಾರಾಷ್ಟ್ರದ ತುಳಜಾಪುರದ ತುಳಜಾಭವಾನಿ ದೇವಿಯಂತೆಯೇ ಇದೆ. ತುಳಜಾಪುರ ಬಿಟ್ಟರೆ ಕರ್ನಾಟಕದಲ್ಲಿ ಇರುವ ಏಕೈಕ ಸಾಮ್ಯತೆ ಇರುವ ದೇವಿ ಇದೊಂದೇ ಆಗಿದೆ. ಮಹಾರಾಷ್ಟ್ರಕ್ಕೆ ಹೋಗಲಾಗದವರು ಇಲ್ಲಿಯೇ ಬಂದು ಪೂಜಿಸಿ ದರ್ಶನ ಪಡೆದುಕೊಳ್ಳುತ್ತಾರೆ.
ಹರಕೆ ಈಡೇರುತ್ತದೆ:
ಈ ದೇವಾಲಯ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಭಕ್ತರಿಂದ ತುಂಬಿ ತುಳುಕುತ್ತದೆ. ಈ ದೇವಿಯ ಮಹಿಮೆಯು ಅಪಾರವಾಗಿದೆ. ದೇವಿಗೆ ಹರಕೆ ಮಾಡಿಕೊಂಡರೆ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ಮದುವೆಯಾಗುವುದು.. ಈಡೇರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.ಅದಕ್ಕೆ ದೇವಾಲಯದಲ್ಲಿ ತೂಗಿ ಬಿಟ್ಟ ನೂರಾರು ಪುಟ್ಟ ತೊಟ್ಟಿಲುಗಳೇ ಸಾಕ್ಷಿ.
ದೇವಿಯ ಅಪ್ಪಣೆ:
ಈ ದೇವಿಯು ಹೂವಿನ ಪ್ರಸಾದದ ಮೂಲಕ ಅಪ್ಪಣೆ ಕೊಡುತ್ತಾಳೆ. ಹಿರೇಉಡ ಗ್ರಾಮದ ಗ್ರಾಮದೇವತೆ ಆಗಿದ್ದಾಳೆ.ಮರಾಠ ಕ್ಷತ್ರಿಯ , ಭಾವಸಾರ ಕ್ಷತ್ರಿಯ,ಲಂಬಾಣಿ ಸಮುದಾಯದವರು ಇಲ್ಲಿಗೆ ವಿಶೇಷವಾಗಿ ನಡೆದುಕೊಳ್ಳುತ್ತಾರೆ. ದೇವಾಲಯದ ಅರ್ಚಕರು ಪಂಚಮಸಾಲಿ ಲಿಂಗಾಯತ ಸಮುದಾಯದವರು.
ದೇವಾಲಯದ ಒಳ ಆವರಣದಲ್ಲಿ ಮಾಂಸಾಹಾರ ನಿಷಿದ್ಧವಾಗಿದೆ. ದೇವಾಲಯದ ಹೊರ ಆವರಣದಲ್ಲಿ ಇದಕ್ಕೆ ವಿಶೇಷ ಅನುಕೂಲತೆ ಮಾಡಲಾಗಿದೆ.




















