ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡಬಾರದು ಎಂಬ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಕೆಲವು ಮಾಧ್ಯಮಗಳು ಉಲ್ಲಂಘಿಸುತ್ತಿರುವುದಾಗಿ ಆರೋಪಿಸಿ, ಆರೋಪಿಯಾಗಿರುವ ನಟ ದರ್ಶನ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡುತ್ತಿರುವ ಚಾನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಅರ್ಜಿ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ವಿಷಯದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಲು ನ್ಯಾಯಪೀಠ ಸೂಚಿಸಿದೆ. ಈ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಪ್ರತಿಕ್ರಿಯಿಸಿ, ಅರ್ಜಿಯಲ್ಲಿ ಕೇಳಿರುವ ವಿಷಯಗಳ ಬಗ್ಗೆ ಸೋಮವಾರದೊಳಗೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಕೆಲವು ಸುದ್ದಿವಾಹಿನಿಗಳು ಗ್ರಾಫಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಅನಿಮೇಷನ್ ಬಳಸಿ ಪ್ರಕರಣದ ದೃಶ್ಯಗಳನ್ನು ಮರುಸೃಷ್ಟಿಸಿ ಪ್ರಸಾರ ಮಾಡುತ್ತಿವೆ. ಅಲ್ಲದೆ, ವಿಚಾರಣಾ ನ್ಯಾಯಾಲಯದಲ್ಲಿ ದಾಖಲಾದ ಸಾಕ್ಷ್ಯಾಧಾರಗಳ ಮೇಲೆ ಚರ್ಚೆ ನಡೆಸುತ್ತಿದ್ದು, ಇದು 2024ರಲ್ಲಿ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯ ನೀಡಿದ ತಡೆಯಾಜ್ಞೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದು, ಇದರಿಂದ ಸಂವಿಧಾನದ ಕಲಂ 14 ಮತ್ತು 21 ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ದರ್ಶನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ 2026ರ ಜನವರಿ 16ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸಿದ ದೂರನ್ನು ಪರಿಗಣಿಸಿ, ಸಂಬಂಧಿತ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ.










